ಕಥುವಾ ಅತ್ಯಾಚಾರ, ಕೊಲೆ ಪ್ರಕರಣದ ಪ್ರಮುಖ ಆರೋಪಿ ಪರ ವಕೀಲನಿಗೆ ಸರಕಾರಿ ಹುದ್ದೆ

Update: 2018-07-18 15:49 GMT

ಜಮ್ಮು, ಜು.18: ಕಥುವಾದಲ್ಲಿ ನಡೆದ ಎಂಟರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯ ಪರ ವಕಾಲತ್ತು ಮಾಡಿದ್ದ ವಕೀಲನಿಗೆ ಸರಕಾರ ಅಡಿಶನಲ್ ಅಡ್ವೊಕೇಟ್ ಜನರಲ್ ಹುದ್ದೆ ನೀಡಿದೆ.

ಆರೋಪಿ ಪರ ವಕೀಲ ಅಸೀಮ್ ಸಾವ್ನಿಯನ್ನು ಸರಕಾರಿ ಹುದ್ದೆಗೆ ನೇಮಕ ಮಾಡಿರುವ ಸರಕಾರದ ಕ್ರಮಕ್ಕೆ ಸಾರ್ವಜನಿಕವಾಗಿ ವಿರೋಧ ವ್ಯಕ್ತವಾಗಿದೆ. ಮೆಹಬೂಬ ಮುಫ್ತಿ ಸರಕಾರದಿಂದ ಹೊರಬಂದಿರುವ ಬಿಜೆಪಿ ಈ ಮೂಲಕ ರಾಜಕೀಯ ಸಂದೇಶವನ್ನು ರವಾನಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಮುರಿದುಬಿದ್ದ ನಂತರ ಜೂನ್ 20ರಿಂದ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಹೇರಲಾಗಿದೆ.

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಕಥುವಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಪಿಡಿಪಿ ಮತ್ತು ಬಿಜೆಪಿ ಮಧ್ಯೆ ವಿರಸ ಮೂಡಲು ಪ್ರಮುಖ ಅಂಶವಾಗಿತ್ತು ಎಂದು ವಿಶ್ಲೇಷಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೆಹಬೂಬ ಮುಫ್ತಿ, "ವಿಶ್ವ ಅಂತರ್‌ರಾಷ್ಟ್ರೀಯ ನ್ಯಾಯ ದಿನದಂದೇ ಈ ನೇಮಕಾತಿ ನಡೆದಿರುವುದು ಕುಚೋದ್ಯವೇ ಸರಿ" ಎಂದು ತಿಳಿಸಿದ್ದಾರೆ. "ಕೊಲೆಗಾರರು ಮತ್ತು ಅತ್ಯಾಚಾರಿಗಳ ಪರ ವಕಾಲತ್ತು ಮಾಡುವವರನ್ನು ಸನ್ಮಾನಿಸುವುದರಿಂದ ನ್ಯಾಯ ವ್ಯವಸ್ಥೆಯ ಸ್ಫೂರ್ತಿಯ ಉಲ್ಲಂಘನೆಯಾಗುತ್ತದೆ. ಇಂಥ ಕ್ರಮಗಳು ನಮ್ಮ ಸಮಾಜದಲ್ಲಿ ವ್ಯಾಪಕವಾಗಿರುವ ಅತ್ಯಾಚಾರ ಸಂಸ್ಕೃತಿಯನ್ನು ಬೆಂಬಲಿಸಿದಂತಾಗುತ್ತದೆ" ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ಅಲೆಮಾರಿ ಬಕೆರ್ವಾಲ್ ಸಮುದಾಯಕ್ಕೆ ಸೇರಿದ ಎಂಟರ ಹರೆಯದ ಬಾಲಕಿಯನ್ನು ಅಪಹರಣಗೈದ ಆರೋಪಿಗಳು ನಂತರ ಆಕೆಯ ಅತ್ಯಾಚಾರ ನಡೆಸಿ ಹತ್ಯೆಗೈದಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿತ್ತು. ಬಂಧನವನ್ನು ವಿರೋಧಿಸಿ ಸ್ಥಳೀಯ ವಕೀಲರ ಸಂಘ ಪ್ರತಿಭಟನೆ ನಡೆಸಿತ್ತು.

ಸದ್ಯ ಈ ಪ್ರಕರಣದ ತನಿಖೆ ಪಂಜಾಬ್‌ನ ಪಠಾಣ್‌ಕೋಟ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News