ಕನ್ಹಯ್ಯಾ ವಿರುದ್ಧ ಒತ್ತಾಯದ ಕ್ರಮ ಬೇಡ: ಜೆನ್‌ಯುಗೆ ಹೈಕೋರ್ಟ್ ನಿರ್ದೇಶ

Update: 2018-07-18 15:29 GMT

ಹೊಸದಿಲ್ಲಿ,ಜು.18: ಜೆನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಗೆ ವಿಧಿಸಲಾಗಿರುವ ದಂಡದ ಕುರಿತಂತೆ ಜು.20ರವರೆಗೆ ಯಾವುದೇ ಒತ್ತಾಯದ ಕ್ರಮವನ್ನು ತೆಗೆದುಕೊಳ್ಳದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ವಿವಿಗೆ ನಿರ್ದೇಶ ನೀಡಿದೆ.

ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದಕ್ಕೆ ಸಂಬಂಧಿಸಿದಂತೆ 2016ರಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದ ಪ್ರಕರಣದಲ್ಲಿ ವಿವಿಯ ಮೇಲ್ಮನವಿ ಪ್ರಾಧಿಕಾರವು ಕನ್ಹಯ್ಯಾ ಗೆ 10,000 ರೂ.ಗಳ ದಂಡವನ್ನು ವಿಧಿಸಿದೆ.ದಂಡವನ್ನು ಪಾವತಿಸಲು ಬುಧವಾರ ಕೊನೆಯ ದಿನವಾಗಿದ್ದು, ದಂಡವನ್ನು ವಿರೋಧಿಸಿ ಕನ್ಹಯ್ಯಾ ಮಂಗಳವಾರ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಬುಧವಾರ ಸಂಬಂಧಿತ ನ್ಯಾಯಾಧೀಶರು ರಜೆಯಲ್ಲಿದ್ದರಿಂದ ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ನ್ಯಾ.ರೇಖಾ ಪಳ್ಳಿ ಅವರು,ತಾನು ಕಡತವನ್ನು ಓದಿಲ್ಲವೆಂದು ಹೇಳಿ,ಜು.20ರಂದು ನಿಯಮಿತ ಪೀಠದೆದುರು ಈ ವಿಷಯವನ್ನಿಡುವಂತೆ ಸೂಚಿಸಿದರು. ದಂಡ ಪಾವತಿ ಕುರಿತಂತೆ ಜು.20ರವರೆಗೆ ಕನ್ಹಯ್ಯಾ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಅವರು ಜೆಎನ್‌ಯುಗೆ ನಿರ್ದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News