×
Ad

ವಿವಾಹದ ಅರ್ಥ ಪತ್ನಿ ಯಾವತ್ತೂ ಲೈಂಗಿಕ ಕ್ರಿಯೆಗೆ ಸಿದ್ಧ ಎಂದಲ್ಲ: ವೈವಾಹಿಕ ಅತ್ಯಾಚಾರದ ಬಗ್ಗೆ ಹೈಕೋರ್ಟ್

Update: 2018-07-18 21:44 IST

ಪ್ರತಿಪಾದನೆ ಹೊಸದಿಲ್ಲಿ, ಜು. 18: ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ದಿಲ್ಲಿ ಉಚ್ಚ ನ್ಯಾಯಾಲಯ, ವಿವಾಹದ ಅರ್ಥ ಪತ್ನಿ ಲೈಂಗಿಕ ಕ್ರಿಯೆಗೆ ಯಾವಾಗಲೂ ಸಿದ್ಧವಾಗಿರಬೇಕು ಎಂದಲ್ಲ ಎಂದಿದೆ. ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸಲು ದೈಹಿಕ ಬಲತ್ಕಾರ ಮಾತ್ರ ಮುಖ್ಯವಲ್ಲ ಎಂದು ನ್ಯಾಯಾಲಯ ಪ್ರತಿಪಾದಿಸಿದೆ.

ಪ್ರಭಾರಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ಸಿ. ಹರಿ ಶಂಕರ್ ಅವರನ್ನು ಒಳಗೊಂಡ ಪೀಠ, ವಿವಾಹದಂತಹ ಸಂಬಂಧದಲ್ಲಿ ಮಹಿಳೆ ಹಾಗೂ ಪುರುಷನಿಗೆ ‘ಲೈಂಗಿಕ ಕ್ರಿಯೆ’ಯನ್ನು ನಿರಾಕರಿಸುವ ಹಕ್ಕು ಇದೆ ಎಂದು ಹೇಳಿದೆ. ವಿವಾಹದ ಅರ್ಥ ಮಹಿಳೆ ಲೈಂಗಿಕ ಕ್ರಿಯೆಗೆ ಯಾವಾಗಲು ಸಿದ್ಧ, ಒಪ್ಪಿದ್ದಾಳೆ ಎಂದಲ್ಲ ಎಂದು ಪೀಠ ಹೇಳಿದೆ. ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸುವಂತೆ ಕೋರಿ ಸಲ್ಲಿಸಲಾದ ಮನವಿ ವಿರೋಧಿಸಿ ಸರಕಾರೇತರ ಸಂಸ್ಥೆ ಪುರುಷರ ಕಲ್ಯಾಣ ಸಮಿತಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ದೈಹಿಕ ಬಲವಂತ ಅತ್ಯಾಚಾರಕ್ಕೆ ಅಗತ್ಯ ಎಂಬುದು ಸರಿಯಾದುದಲ್ಲ. ಅತ್ಯಾಚಾರದಲ್ಲಿ ಗಾಯ ಆಗಿದೆಯೇ ಎಂದು ಪರಿಶೀಲಿಸುವ ಅಗತ್ಯ ಕೂಡ ಇಲ್ಲ. ಇಂದು ಅತ್ಯಾಚಾರದ ವ್ಯಾಖ್ಯಾನ ಸಂಪೂರ್ಣ ಭಿನ್ನವಾಗಿದೆ ಎಂದು ನ್ಯಾಯಾಲಯ ಹೇಳಿದೆ.

 ಈಗಿರುವ ವಿವಿಧ ಕಾನೂನುಗಳ ಅಡಿ ವೈವಾಹಿಕ ಜೀವನದಲ್ಲಿ ಪತ್ನಿಗೆ ರಕ್ಷಣೆ ಇದೆ ಎಂದು ಸರಕಾರೇತರ ಸಂಸ್ಥೆ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಅಮಿತ್ ಲಖನಿ ಹಾಗೂ ರಿತ್ವಿಕ್ ಬಿಸಾರಿಯಾ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಇದು ಈಗಾಗಲೇ ಇರುವ ಕಾನೂನಿನಲ್ಲಿ ಒಳಗೊಂಡಿದೆ ಎಂದಾದರೆ, ಪತಿ ತನ್ನ ಪತ್ನಿಯೊಂದಿಗೆ ನಡೆಸುವ ಬಲವಂತದ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಐಪಿಸಿಯ 375ನೇ ವಿಧಿಯಲ್ಲಿ ಯಾಕೆ ಹೇಳಲಾಗಿದೆ ಎಂದಿದೆ. ನ್ಯಾಯಾಲಯ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 8ಕ್ಕೆ ನಿಗದಿಪಡಿಸಿದೆ.

‘‘ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದೇ ಇದ್ದರೆ ಮನೆ ಖರ್ಚಿಗೆ ಮತ್ತು ಮಕ್ಕಳಿಗೆ ಹಣ ನೀಡಲಾರೆ ಎದು ಪತಿ ಪತ್ನಿಗೆ ಬೆದರಿಕೆ ಒಡ್ಡಿದರೆ, ಆಗ ಪತ್ನಿ ಪತಿಯೊಂದಿಗೆ ಅನಿವಾರ್ಯವಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆಗ ಏನಾಗುತ್ತದೆ?’’

ದಿಲ್ಲಿ ಉಚ್ಚ ನ್ಯಾಯಾಲಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News