ಹಲ್ಲೆಯ ಹಿಂದೆ ಜಾರ್ಖಂಡ್ ಸರಕಾರದ ಪಿತೂರಿ: ಸ್ವಾಮಿ ಅಗ್ನಿವೇಶ್

Update: 2018-07-18 16:18 GMT

ರಾಂಚಿ, ಜು. 18: ಪಾಕೂರ್‌ನಲ್ಲಿ ಮಂಗಳವಾರ ಭಾರತೀಯ ಯುವ ಜನತಾ ಮೋರ್ಚಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್, ಈ ಘಟನೆ ರಾಜ್ಯ ಸರಕಾರದ ಪೂರ್ವಯೋಜಿತ ಪಿತೂರಿ ಎಂದು ವ್ಯಾಖ್ಯಾನಿಸಿದ್ದಾರೆ ಹಾಗೂ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

 ಮಂಗಳವಾರ ಬೆಳಗ್ಗೆ ರೈಲಿನಲ್ಲಿ ರಾಂಚಿಗೆ ತಲುಪಿದ ಸ್ವಾಮಿ ಅಗ್ನಿವೇಶ್ ಅವರನ್ನು ಮಾಜಿ ಕೇಂದ್ರ ಸಚಿವ ಸುಬೋಧ್ ಕಾಂತ್ ಸಹಾಯ್ ಹಾಗೂ ಜಾರ್ಖಂಡ್ ವಿಕಾಸ ಮೋರ್ಚಾ ವರಿಷ್ಠ ಬಾಬುಲಾಲ್ ಮರಾಂಡಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಬೆಂಬಲಿಸಿದ್ದರು. ‘‘ಮುಖ್ಯಮಂತ್ರಿ ರಘುವರ ದಾಸ್ ಹಾಗೂ ಪಾಕುರ್‌ನ ಜಿಲ್ಲಾಡಳಿತಕ್ಕೆ ನಾನು ಆಗಮಿಸುವ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಆದರೆ, ಯಾವುದೇ ಭದ್ರತೆ ಏರ್ಪಡಿಸಿಲ್ಲ. ಆದುದರಿಂದ ಇದು ರಾಜ್ಯ ಸರಕಾರದ ಪೂರ್ವಯೋಜಿತ ಪಿತೂರಿ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿ. ಅಲ್ಲದೆ ಅವರು ನನಗೆ ಮುನ್ನೆಚ್ಚರಿಕೆ ನೀಡಬೇಕಾಗಿತ್ತು’’ ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

 ‘‘ಥಳಿಸಿದ ಗುಂಪು ನನ್ನನ್ನು ಹತ್ಯೆಗೈಯಲು ಯೋಜಿಸಿತ್ತು. ಪಾಕುರ್‌ನಲ್ಲಿ ನನ್ನ ಜೊತೆಗಿದ್ದ ಬೆಂಬಲಿಗರು ಹಲ್ಲೆ ನಡೆಸಿದ 8ರಿಂದ 10 ಜನರ ಹೆಸರು ಹೇಳಿದರೂ ಇದುವರೆಗೆ ಯಾರೊಬ್ಬರನ್ನೂ ಬಂಧಿಸಿಲ್ಲ’’ ಎಂದು ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.

ಸ್ವಾಮಿ ಅಗ್ನಿವೇಶ್ ‘ವಂಚಕ’, ‘ವಿದೇಶಿ ಏಜೆಂಟ್’

 ಭಾರತೀಯ ಯುವ ಜನತಾ ಮೋರ್ಚಾ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಸ್ವಾಮಿ ಅಗ್ನಿವೇಶ್‌ಗೆ ಹಲ್ಲೆ ನಡೆಸಿದ ಒಂದು ದಿನದ ಬಳಿಕ ರಾಜ್ಯ ನಗರಾಭಿವೃದ್ಧಿ ಸಚಿವ ಸಿ.ಪಿ. ಸಿಂಗ್ ಅವರು, ಅಗ್ನಿವೇಶ್ ‘ವಂಚಕ’ ಹಾಗೂ ‘ವಿದೇಶಿ ಏಜೆಂಟ್’ ಎಂದು ಟೀಕಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ ಸ್ವಾಮಿ ಅಗ್ನಿವೇಶ್ ಅವರು ವಿದೇಶಿ ದೇಣಿಗೆಯಿಂದ ಬದುಕುತ್ತಿರುವವರು. ಸಾಮಾನ್ಯ ಜನರನ್ನು ವಂಚಿಸಲು ಅವರು ಕೇಸರಿ ಬಟ್ಟೆ ತೊಡುತ್ತಿದ್ದಾರೆ. ಅವರು ವಂಚಕ. ಸ್ವಾಮಿ ಅಲ್ಲ. ಜನಪ್ರಿಯತೆ ಪಡೆಯುವ ಉದ್ದೇಶದಿಂದ ಅವರೇ ದಾಳಿಯ ನಾಟಕ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News