ರೈತರ ಹೆಸರಲ್ಲಿ 5,400 ಕೋಟಿ ರೂ. ಸಾಲ ಪಡೆದ ಉದ್ಯಮಿ !

Update: 2018-07-18 17:48 GMT

ನಾಗಪುರ, ಜು.18: ರೈತರ ಹೆಸರಲ್ಲಿ ನಕಲಿ ದಾಖಲೆ ಪತ್ರ ತಯಾರಿಸಿದ ಮಹಾರಾಷ್ಟ್ರದ ಉದ್ಯಮಿ 5,400 ಕೋ.ರೂ.ಗೂ ಮಿಕ್ಕಿದ ಸಾಲ ಪಡೆದಿರುವುದಾಗಿ ಮಹಾರಾಷ್ಟ್ರ ವಿಧಾನಸಭೆಯ ವಿಪಕ್ಷ ನಾಯಕ ಧನಂಜಯ್ ಮುಂಡೆ ಬುಧವಾರ ತಿಳಿಸಿದ್ದಾರೆ.

ವಿಧಾನಪರಿಷತ್‌ನಲ್ಲಿ ನಿಯಮ 289ರಡಿ ವಿಷಯ ಪ್ರಸ್ತಾವಿಸಿದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ (ಎನ್‌ಸಿಪಿ)ಯ ಮುಖಂಡ ಮುಂಡೆ , ಪ್ರಭಾನಿ ಜಿಲ್ಲೆಯಲ್ಲಿರುವ ಗಂಗಾಖೇಡ್ ಶುಗರ್ ಆ್ಯಂಡ್ ಎನರ್ಜಿ ಲಿ.ಸಂಸ್ಥೆಯ ನಿರ್ದೇಶಕ ರತ್ನಾಕರ್ ಗುತ್ತೆ ಎಂಬ ಉದ್ಯಮಿ 22 ನಕಲಿ ಕಂಪೆನಿಗಳ ಹೆಸರಲ್ಲಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾನೆ. ಅಲ್ಲದೆ 2015ರಲ್ಲಿ ‘ಉಳುಮೆ ಮತ್ತು ಸಾಗಣೆ’ ಯೋಜನೆಯಡಿ 600ಕ್ಕೂ ಹೆಚ್ಚು ರೈತರ ಹೆಸರಿನಲ್ಲಿ ಬ್ಯಾಂಕ್ ಸಾಲ ಪಡೆದಿದೆ. ಇದರಲ್ಲಿ ಕೆಲವು ಖಾತೆಗಳಲ್ಲಿ 25 ಲಕ್ಷಕ್ಕೂ ಅಧಿಕ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಗುತ್ತೆ ವಿರುದ್ಧ ಜುಲೈ 5ರಂದು ಎಫ್‌ಐಆರ್ ದಾಖಲಿಸಲಾಗಿದೆ, ಆದರೆ ಇದುವರೆಗೆ ಬಂಧಿಸಿಲ್ಲ ಎಂದ ಅವರು, ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ ತಕ್ಷಣ ಗುತ್ತೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಆತ ಪಿಎನ್‌ಬಿ ಹಗರಣದ ಆರೋಪಿ ನೀರವ್ ಮೋದಿಯಂತೆ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಮುಂಡೆ ಅಭಿಪ್ರಾಯಕ್ಕೆ ಸಹಮತ ಸೂಚಿಸಿದ ವಿಧಾನಪರಿಷತ್ ಅಧ್ಯಕ್ಷ ರಾಮರಾಜೆ ನಿಂಬಾಳ್ಕರ್, ತಕ್ಷಣ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News