ಪ್ರತಿಭಟನೆಯ ಎಚ್ಚರಿಕೆ ಮಧ್ಯೆ ಎಫ್‌ಆರ್‌ಡಿಐ ಮಸೂದೆ ಹಿಂಪಡೆದ ಕೇಂದ್ರ

Update: 2018-07-18 16:58 GMT

ಹೊಸದಿಲ್ಲಿ, ಜು.18: ಕೇಂದ್ರ ಸರಕಾರ 2017ರಲ್ಲಿ ಜಾರಿಗೆ ತಂದಿರುವ ಆರ್ಥಿಕ ನಿರ್ಣಯ ಮತ್ತು ಠೇವಣಿ ವಿಮೆ (ಎಫ್‌ಆರ್‌ಡಿಐ) ಕಾಯ್ದೆಯ ವಿರುದ್ಧ ಬ್ಯಾಂಕ್ ಉದ್ಯೋಗಿಗಳ ಸಂಘಟನೆ ಮತ್ತು ಸರಕಾರಿ ಸ್ವಾಮ್ಯದ ವಿಮಾ ಸಂಸ್ಥೆಯ ಉದ್ಯೋಗಿಗಳು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಹಿಂಪಡೆಯಲು ಕೇಂದ್ರ ಸರಕಾರ ನಿರ್ಧರಿಸಿದೆ.

ನೂತನ ಮಸೂದೆಯಿಂದಾಗಿ ಬ್ಯಾಂಕ್‌ಗಳಲ್ಲಿಡಲಾಗುವ ಠೇವಣಿಯ ಭದ್ರತೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಇದು ಜನರಲ್ಲಿ ಆತಂಕವನ್ನು ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ಹಿಂಪಡೆಯಲು ಸಾಧ್ಯವಾಗುವಂತೆ ಸಂಪುಟ ಅನುಮತಿ ಪಡೆಯಲು ಮಸೂದೆ ಹಿಂಪಡೆಯುವಿಕೆ ಪ್ರಸ್ತಾವವನ್ನು ಸಿದ್ಧಪಡಿಸುವಂತೆ ಆರ್ಥಿಕ ವ್ಯವಹಾರಗಳ ಇಲಾಖೆಗೆ ಕೇಂದ್ರ ಸೂಚಿಸಿದೆ. ಬ್ಯಾಂಕ್‌ಗಳು ದಿವಾಳಿಯಾದ ಸಂದರ್ಭದಲ್ಲಿ ಠೇವಣಿದಾರರಿಗೆ ತಮಗೆ ಸಿಗಲಿರುವ ಮೊತ್ತದಲ್ಲಿ ಒಂದು ಭಾಗವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ನಿಯಮದ ಕಾರಣದಿಂದ ಈ ಮಸೂದೆ ಸಾಕಷ್ಟು ವಿವಾದ ಮತ್ತು ಆತಂಕಕ್ಕೆಡೆಮಾಡಿ ಕೊಟ್ಟಿತ್ತು.

ಇದರಿಂದಾಗಿ ಠೇವಣಿದಾರರು ಬ್ಯಾಂಕ್‌ಗಳಲ್ಲಿದ್ದ ತಮ್ಮ ಠೇವಣಿಯನ್ನು ಹಿಂಪಡೆಯಲು ಆರಂಭಿಸಿದ್ದರು ಮತ್ತು ಸಾರ್ವಜನಿಕರಿಗೆ ಬ್ಯಾಂಕ್‌ಗಳ ಮೇಲೆ ಇದ್ದ ವಿಶ್ವಾಸ ಕಡಿಮೆಯಾಗುವ ಸಾಧ್ಯತೆಯಿತ್ತು. ಎಲ್ಲ ಮಸೂದೆಗಳನ್ನು ಸಂಪುಟದ ಒಪ್ಪಿಗೆ ನಂತರವೇ ಅನುಷ್ಠಾನಗೊಳಿಸಲಾಗುವ ಕಾರಣ ಒಂದು ಮಸೂದೆಯನ್ನು ಹಿಂಪಡೆಯಲೂ ಸಂಪುಟದ ಅನುಮತಿ ಅಗತ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News