ಅಮಾಯಕರ ಬಲಿತೆಗೆದುಕೊಳ್ಳುವ ಗುಂಪು ಹಲ್ಲೆಗಳು

Update: 2018-07-18 18:35 GMT

ಮಾನ್ಯರೇ,

ಗುಂಪು ದಾಳಿಯೆಂಬ ಪಿಡುಗಿನಿಂದ ದೇಶ ಇಂದು ತತ್ತರಿಸಿ ಹೋಗಿದೆ. ಯಾವ ಗುಂಪು ಯಾರ ಮೇಲೆ ಎಲ್ಲಿ ಮತ್ತು ಹೇಗೆ ದಾಳಿ ನಡೆಸುತ್ತದೆಯೋ ಎಂಬ ಭೀತಿಯಲ್ಲಿ ದೇಶದ ಜನತೆ ಇಂದು ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ. ಇತ್ತೀಚೆಗೆ ನೆರೆಯ ಹೈದರಾಬಾದ್‌ನಿಂದ ಬೀದರ್‌ಗೆ ವಾರದ ರಜೆ ಕಳೆಯಲು ಬಂದ ಅಮಾಯಕ ಮುಹಮ್ಮದ್ ಅಝಮ್ ಎಂಬ ಯುವಕನನ್ನು ಮನುಷ್ಯ ರೂಪದಲ್ಲಿರುವ ರಾಕ್ಷಸರು ಕೊಂದು ಜೊತೆಗಿದ್ದವರ ಮೇಲೆ ತೀವ್ರ ಹಲ್ಲೆ ನಡೆಸಿ ಗಾಯಗೊಳಿಸಿದ್ದು ನಿಜಕ್ಕೂ ನಾಗರಿಕ ಸಮಾಜವು ತಲೆತಗ್ಗಿಸುವಂತಹ ಕೃತ್ಯವಾಗಿದೆ.
ಇಂದು ದೇಶದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಗೃಹ ಇಲಾಖೆ ಇದ್ದೂ ಇಲ್ಲದಂತಾಗಿದೆ. ಅಪರಾಧಿಗಳನ್ನು ಹದ್ದುಬಸ್ತಿನಲ್ಲಿಡುವುದರಲ್ಲಿ ವ್ಯವಸ್ಥೆಯು ಸೋತಿದ್ದು ಇಲ್ಲಿ ಕಾನೂನು ಇರುವುದು ಕೇವಲ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಬೀದರ್‌ನಲ್ಲಿ ನಡೆದ ಗುಂಪು ಹಲ್ಲೆಯ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಎಗ್ಗಿಲ್ಲದೇ ಹರಿದಾಡುತ್ತಿದ್ದು, ಅದು ಒಂದು ಬಗೆಯಲ್ಲಿ ಮುಂದಿನ ದಾಳಿಗೆ ಪ್ರೇರಣೆ ನೀಡುವಂತಿದೆ. ಆ ವೀಡಿಯೊದಲ್ಲಿ ಹಲ್ಲೆಗೊಳಗಾದವರು ಪಕ್ಕಕ್ಕಿರಲಿ ಸ್ವತಃ ಪೊಲೀಸ್ ಸಿಬ್ಬಂದಿಯೇ ಅಸಹಾಯಕ ಸ್ಥಿತಿಯಲ್ಲಿ ನಿಂತು ಜನರನ್ನು ಸುಮ್ಮನಿರುವಂತೆ ಬೇಡಿಕೊಳ್ಳುತ್ತಿದ್ದುದು ವ್ಯವಸ್ಥೆಯ ಗಂಭೀರತೆಯ ಬಗ್ಗೆ ಚಿಂತಿಸುವಂತಾಗಿದೆ. ಆ ಸಮಯದಲ್ಲಿ ಪೊಲೀಸ್ ಸಿಬ್ಬಂದಿ ತಕ್ಷಣ ಎಚ್ಚೆತ್ತು ಲಾಠಿ ಚಾರ್ಜ್ ಮೂಲಕ ಮಾಡಬಹುದಿತ್ತು. ಆದರೆ ಅದು ಇವರಿಂದ ಸಾಧ್ಯವಾಗದಿರುವುದು ದುರದೃಷ್ಟಕರ.
ಇಂತಹ ರಾಕ್ಷಸರನ್ನು ನಿಯಂತ್ರಿಸಲು ನಮ್ಮ ಸರಕಾರಕ್ಕೆ ಸಾಧ್ಯವಾಗದಿದ್ದರೆ ಸಂಬಂಧಪಟ್ಟವರು ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ವದಂತಿಗಳನ್ನು ಹರಡುವವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪದೇ ಪದೇ ಕೇವಲ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಸಂಬಂಧಿತರು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಭವಿಷ್ಯದಲ್ಲಿ ಸಂಭವಿಸಬಹುದಾದ ಅನಾಹುತಗಳಿಂದ ದೇಶದ ಜನತೆಯನ್ನು ಕಾಪಾಡಲಿ.

Writer - ಆರ್. ಎಚ್. ಇಟಗಿ, ರೋಣ

contributor

Editor - ಆರ್. ಎಚ್. ಇಟಗಿ, ರೋಣ

contributor

Similar News