ಅಗ್ರ ಸ್ಥಾನ ಕಾಯ್ದುಕೊಂಡ ವಿರಾಟ್ ಕೊಹ್ಲಿ

Update: 2018-07-18 18:39 GMT

ದುಬೈ, ಜು.18: ಐಸಿಸಿ ಏಕದಿನ ರ್ಯಾಂಕಿಂಗ್ ಇಂದು ಬಿಡುಗಡೆಯಾಗಿದೆ. ಜೀವನ ಶ್ರೇಷ್ಠ 911 ಅಂಕ ಗಳಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 ಶತಕ ಗಳಿಸಿರುವ ಇಂಗ್ಲೆಂಡ್‌ನ ಜೋ ರೂಟ್ ಎರಡನೇ ಸ್ಥಾನಕ್ಕೇರಿದ್ದಾರೆ.

ರೂಟ್ ಲಾರ್ಡ್ಸ್ ಗ್ರೌಂಡ್‌ನಲ್ಲಿ ಔಟಾಗದೆ 113 ಹಾಗೂ ಹೆಡ್ಡಿಂಗ್ಲೆಯಲ್ಲಿ ನಡೆದ 3ನೇ ಪಂದ್ಯದಲ್ಲಿ ಔಟಾಗದೆ 100 ರನ್ ಗಳಿಸಿದರು. ಸರಣಿಯ ಆರಂಭದಲ್ಲಿ ಆರನೇ ಸ್ಥಾನದಲ್ಲಿದ್ದ ರೂಟ್ ಸತತ 2 ಶತಕ ಸಿಡಿಸಿದ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನ ಭಡ್ತಿ ಪಡೆದಿದ್ದಾರೆ.

ರೂಟ್ 818 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದಾರೆ. ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯ ವಿರುದ್ಧ ಬ್ರಿಸ್ಬೇನ್‌ನಲ್ಲಿ ಏಕದಿನ ಪಂದ್ಯ ನಡೆದ ಬಳಿಕ ರೂಟ್ 819 ಅಂಕ ಗಳಿಸಿದ್ದರು.

ರೂಟ್ ಎರಡನೇ ಸ್ಥಾನಕ್ಕೇರಿದ ಕಾರಣ ಪಾಕಿಸ್ತಾನದ ಬಾಬರ್ ಆಝಂ 3ನೇ ಸ್ಥಾನಕ್ಕೆ ಜಾರಿದ್ದಾರೆ. ಅಮಾನತುಗೊಂಡಿರುವ ಡೇವಿಡ್ ವಾರ್ನರ್ ಐದನೇ ಸ್ಥಾನದಲ್ಲೂ, ರಾಸ್ ಟೇಲರ್ 6ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಔಟಾಗದೆ 137 ರನ್ ಗಳಿಸಿದ ಹಿನ್ನೆಲೆಯಲ್ಲಿ 4ನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಕುಲ್‌ದೀಪ್ ಯಾದವ್ 8 ಸ್ಥಾನ ಭಡ್ತಿ ಪಡೆದು ಆರನೇ ಸ್ಥಾನ ತಲುಪಿದ್ದಾರೆ. ಜೀವನಶ್ರೇಷ್ಠ 684 ಅಂಕ ಗಳಿಸಿದ್ದಾರೆ. ಕುಲ್‌ದೀಪ್ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಮೊದಲ ಹಾಗೂ 2ನೇ ಏಕದಿನದಲ್ಲಿ ಕ್ರಮವಾಗಿ 25ಕ್ಕೆ 6 ಹಾಗೂ 68ಕ್ಕೆ 3 ವಿಕೆಟ್ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News