×
Ad

ಅವಿಶ್ವಾಸ ನಿರ್ಣಯ: ಲೋಕಸಭೆಯಲ್ಲಿ ಪಕ್ಷಗಳ ಬಲಾಬಲ ಹೀಗಿದೆ…

Update: 2018-07-19 21:00 IST

ಹೊಸದಿಲ್ಲಿ, ಜು.19: ಲೋಕಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಅದನ್ನು ಸ್ವೀಕರಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್, ನಿರ್ಣಯದ ಬಗ್ಗೆ ಚರ್ಚೆ ನಡೆಸುವ ದಿನಾಂಕವನ್ನು ಎರಡು ಮೂರು ದಿನಗಳೊಳಗೆ ಘೋಷಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ, ಎನ್‌ಡಿಎ ಮೈತ್ರಿಕೂಟದ ಎದುರು ಎನ್‌ಡಿಎ ವಿರೋಧಿ ಮೈತ್ರಿಕೂಟ ಹೆಚ್ಚಿನ ಬೆಂಬಲವನ್ನು ಹೊಂದಿಲ್ಲ ಎಂಬ ಭಾವನೆ ಸಣ್ಣ ಪ್ರಾದೇಶಿಕ ಪಕ್ಷಗಳಲ್ಲಿ ಮೂಡಿಸುವ ಉದ್ದೇಶದಿಂದ ಮೋದಿ ಸರಕಾರ ಲೋಕಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಮುಂದಾಗಿದೆ. ಈ ಸಂಬಂಧ ಗುರುವಾರ ಮತ್ತು ಶುಕ್ರವಾರ ಸದನದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ.

ಗುರುವಾರ ಆರಂಭವಾದ ಲೋಕಸಭೆಯ ಮುಂಗಾರು ಅಧಿವೇಶನ ಆಗಸ್ಟ್ 10ರಂದು ಕೊನೆಯಾಗಲಿದೆ. ಅವಿಶ್ವಾಸ ಗೊತ್ತುವಳಿ ಮಂಡಿಸಿರುವ ಎಲ್ಲ ವಿಪಕ್ಷ ನಾಯಕರನ್ನು ಸ್ಪೀಕರ್ ಹೆಸರಿಸಿದ್ದಾರೆ. ಆಂಧ್ರ ಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ತೆಲುಗು ದೇಶಂ ಪಕ್ಷ ಕಳೆದ ಮಾರ್ಚ್‌ನಲ್ಲಿ ಎನ್‌ಡಿಎ ಮಿತ್ರಕೂಟದಿಂದ ಹೊರಬಂದಿತ್ತು. ಗುರುವಾರದಂದು ಟಿಡಿಪಿ ಸದಸ್ಯರು ಶೂನ್ಯ ವೇಳೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದಾರೆ. ವಿಪಕ್ಷಗಳ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್, ಸರಕಾರವು ಅವಿಶ್ವಾಸ ನಿರ್ಣಯವನ್ನು ಎದುರಿಸಲು ಸಿದ್ಧವಿದೆ. ಸರಕಾರಕ್ಕೆ ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತವಿರುವ ಕಾರಣ ಈ ನಿರ್ಣಯದಿಂದ ಸರಕಾರಕ್ಕೆ ಯಾವುದೇ ತೊಂದರೆಯಾಗದು ಎಂದು ತಿಳಿಸಿದ್ದಾರೆ. ಈ ಹಿಂದೆ ಬಜೆಟ್ ಅಧಿವೇಶನದ ವೇಳೆಯೂ ಟಿಡಿಪಿ ಸದಸ್ಯರು ಕೇಂದ್ರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆದರೆ ಅಂದು ಸದನವು ವ್ಯವಸ್ಥಿತವಾಗಿಲ್ಲ ಎಂದು ತಿಳಿಸಿದ್ದ ಸ್ಪೀಕರ್ ಅವಿಶ್ವಾಸ ಗೊತ್ತುವಳಿಯನ್ನು ತಿರಸ್ಕರಿಸಿದ್ದರು. ಇದಕ್ಕೂ ಮುನ್ನ, ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸಿದ್ಧವಿರುವುದಾಗಿ ಅನೇಕ ಪಕ್ಷಗಳು ತಿಳಿಸಿವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು. ಸೋಮವಾರದಂದು ಸುಮಾರು ಹನ್ನೆರಡು ಪಕ್ಷಗಳು ಸಭೆ ನಡೆಸಿದ್ದಾರೆ. ಎಲ್ಲರೂ ಒಟ್ಟಾಗಿ ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿದ್ದೇವೆ ಎಂದು ಖರ್ಗೆ ತಿಳಿಸಿದ್ದರು. ಜೊತೆಗೆ ಆಂಧ್ರ ಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸೇರಿದಂತೆ ಗುಂಪು ಹತ್ಯೆ, ಮಹಿಳೆಯರ ಮತ್ತು ದಲಿತರ ಶೋಷಣೆ ಹಾಗೂ ಎಸ್‌ಸಿ ಕಾನೂನನ್ನು ಸಡಿಲಗೊಳಿಸುವಿಕೆ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಅವರು ತಿಳಿಸಿದ್ದರು.

ಲೋಕಸಭೆಯ ಒಟ್ಟು ಸದಸ್ಯ ಬಲ-544

ಸದ್ಯದ ಸದಸ್ಯ ಬಲ-534

ಎನ್‌ಡಿಎ ಸದಸ್ಯ ಬಲ-314

ಬಿಜೆಪಿ- 273

ಶಿವಸೇನೆ-18

ಎಲ್‌ಜೆಪಿ-6

ಶಿರೋಮಣಿ ಅಕಾಲಿದಳ-4

ಆರ್‌ಎಲ್‌ಎಸ್‌ಪಿ-3

ಅಪ್ನಾದಳ-2

ಜೆಡಿಯು-2

ಇತರೆ-6

ಯುಪಿಎ ಸದಸ್ಯಬಲ-66

ಕಾಂಗ್ರೆಸ್-48

ಎನ್‌ಸಿಪಿ-7

ಆರ್‌ಜೆಡಿ-3

ಜೆಎಂಎಂ-2

ಐಯುಎಂಎಲ್-2

ಜೆಡಿಎಸ್-1

ಇತರೆ-3

ಬಣದಲ್ಲಿರದ ಪಕ್ಷಗಳು;

ತೆಲುಗುದೇಶಂ ಪಕ್ಷ-16

ತೃಣಮೂಲ ಕಾಂಗ್ರೆಸ್-34

ಎಐಎಡಿಎಂಕೆ (37)

ಬಿಜು ಜನತಾದಳ (20)

ಟಿಆರ್‌ಎಸ್ (11)

ಐಎನ್‌ಎಲ್‌ಡಿ (2)

ಸಿಪಿಐಎಂ-9

ಎಸ್‌ಪಿ-7

ಎಎಪಿ-4

ವೈಎಸ್‌ಆರ್ ಕಾಂಗ್ರೆಸ್-4

ಸ್ವತಂತ್ರ-3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News