ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಲಿರುವ ಶಿವಸೇನೆ

Update: 2018-07-19 15:35 GMT

ಮುಂಬೈ, ಜು. 19: ತಾನು ಅವಿಶ್ವಾಸ ಗೊತ್ತುವಳಿಯ ವಿರುದ್ಧ ಮತ ಚಲಾಯಿಸುವುದಾಗಿ ಬಿಜೆಪಿ ಮಿತ್ರ ಪಕ್ಷವಾದ ಶಿವಸೇನೆ ಗುರುವಾರ ಹೇಳಿದೆ. ಎನ್‌ಡಿಎ ಸರಕಾರಕ್ಕೆ ಬೆಂಬಲ ನೀಡುವಂತೆ ನಿರ್ದೇಶಿಸಿ ಶಿವಸೇನೆ ತನ್ನ ಸಂಸದರಿಗೆ ಸಚೇತಕಾಜ್ಞೆ ಹೊರಡಿಸಿದೆ. ಅವಿಶ್ವಾಸ ಗೊತ್ತುವಳಿಗೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಭೇಟಿ ಆದ ಬಳಿಕ ಶಿವಸೇನೆ ಈ ನಿರ್ಧಾರ ತೆಗೆದುಕೊಂಡಿದೆ.

ಶುಕ್ರವಾರ ನಡೆಯಲಿರುವ ಅವಿಶ್ವಾಸ ಗೊತ್ತುವಳಿ ಸಂದರ್ಭ ಪಕ್ಷ ಬಿಜೆಪಿಯನ್ನು ಬೆಂಬಲಿಸಬೇಕೇ ಬೇಡವೇ ಎಂಬ ಬಗ್ಗೆ ಉದ್ದವ್ ಠಾಕ್ರೆ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಈ ಹಿಂದೆ ಹೇಳಿದ್ದರು.

ಆಂಧ್ರಪ್ರದೇಶದ ಸಮಸ್ಯೆಗೆ ಅವಿಶ್ವಾಸ ಗೊತ್ತು ವಳಿ: ಪಳನಿ ಸ್ವಾಮಿ

ನರೇಂದ್ರ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಎಐಎಡಿಎಂಕೆ ಬೆಂಬಲಿಸದು ಎಂಬ ಸೂಚನೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿ ಸ್ವಾಮಿ, ಟಿಡಿಪಿ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತಿದೆ ಎಂದಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ಹಾಗೂ ಕಾವೇರಿ ಜಲ ನಿಯಂತ್ರಣ ಸಮಿತಿ ರೂಪಿಸುವಂತೆ ಕೋರಿ ಎಐಎಡಿಎಂಕೆ ಸಂಸದರು ಸುಮಾರು ಮೂರು ವಾರಗಳ ಕಾಲ ಲೋಕಸಭೆಯ ಕಲಾಪ ಸ್ಥಗಿತಗೊಳಿಸಿದ್ದರು. ಆದರೆ, ಯಾವುದೇ ಪಕ್ಷ ಕೂಡ ತಮಿಳುನಾಡಿಗೆ ಬೆಂಬಲ ನೀಡಲಿಲ್ಲ ಎಂದು ಅವರು ಹೇಳಿದರು.

“ನೀವು ಅರ್ಥ ಮಾಡಿಕೊಳ್ಳಿ. ಅವರು (ಟಿಡಿಪಿ) ಆಂಧ್ರಪ್ರದೇಶಕ್ಕೆ ಸಂಬಂಧಿಸಿ ಸಮಸ್ಯೆಗೆ ಅವಿಶ್ವಾಸ ಗೊತ್ತುವಳಿ ಮಂಡಿಸಲಿಸಿದ್ದಾರೆ. ತಮಿಳುನಾಡಿನ ಎಐಎಡಿಎಂಕೆ ಸಂಸದರು ಸಂಸತ್ ಕಲಾಪ ಸ್ಥಗಿತಗೊಳಿಸಿದಾಗ, ನಮಗಾಗಿ ಯಾರು ಧ್ವನಿ ಎತ್ತಿದರು? ಕಾವೇರಿ ನದಿ ಮುಖಜ ಭೂಮಿಯ ರೈತರ ಸಮಸ್ಯೆಗಳನ್ನು ಪರಿಹರಿಸಲು ಯಾರು ಮುಂದೆ ಬಂದರು” ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News