ದೇವಸ್ಥಾನದಲ್ಲಿ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ಗೋವಾ ಸಚಿವರ ಒಲವು
ಪಣಜಿ,ಜು.19: ಅರ್ಚಕನೋರ್ವನಿಂದ ಲೈಂಗಿಕ ಕಿರುಕುಳದ ವಿರುದ್ಧ್ದ ಖ್ಯಾತ ಶ್ರೀ ಮಂಗೇಶಿ ದೇವಸ್ಥಾನದ ಆಡಳಿತ ಸಮಿತಿಗೆ ಸಲ್ಲಿಸಲಾಗಿರುವ ಎರಡು ದೂರುಗಳ ಕುರಿತು ವಿಧ್ಯುಕ್ತ ತನಿಖೆಗೆ ಗೋವಾದ ಕಲೆ ಮತ್ತು ಸಂಸ್ಕೃತಿ ಸಚಿವ ಗೋವಿಂದ ಗಾವಡೆ ಅವರು ಒಲವು ವ್ಯಕ್ತಪಡಿಸಿದ್ದು,ಓರ್ವ ಬಿಜೆಪಿ ಶಾಸಕರೂ ಅವರೊಂದಿಗೆ ಧ್ವನಿಗೂಡಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಾವಡೆ,ಈ ದೂರುಗಳ ಬಗ್ಗೆ ವಿಚಾರಣೆ ನಡೆಯಬೇಕೆಂದು ತಾನು ಬಯಸಿದ್ದೇನೆ. ಈ ಬಗ್ಗೆ ತಾನು ದೇವಸ್ಥಾನ ಸಮಿತಿಯನ್ನು ಕೇಳಿಲ್ಲ. ಆದರೆ ಅದು ತನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವುದರಿಂದ ನಂಬಲರ್ಹ ಮೂಲಗಳ ಮೂಲಕ ತನಗೆ ಮಾಹಿತಿ ಲಭಿಸಿದೆ. ದೇವಸ್ಥಾನದ ಜನರು ಮತ್ತು ಪ್ರದೇಶದ ನಿವಾಸಿಗಳು ಏನು ಹೇಳುತ್ತಾರೆ ಎನ್ನುವುದನ್ನು ತಿಳಿಯಲು ಬಯಸಿದ್ದೇನೆ ಎಂದು ಹೇಳಿದರು.
ಮಂಗೇಶಿ ದೇವಸ್ಥಾನದಲ್ಲಿ ತಮಗೆ ಲೈಂಗಿಕ ಕಿರುಕುಳವಾಗಿರುವ ಬಗ್ಗೆ ಅಮೆರಿಕದಲ್ಲಿ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿನಿ ಸೇರಿದಂತೆ ಇಬ್ಬರು ಯುವತಿಯರು ಕಳೆದ ಜೂನ್‌ನಲ್ಲಿ ಸಮಿತಿಗೆ ದೂರು ನೀಡಿದ್ದರು.
ಗರ್ಭಗುಡಿಯ ಸುತ್ತ ಪ್ರದಕ್ಷಿಣೆ ಮಾಡಿಸುವ ನೆಪದಲ್ಲಿ ಅರ್ಚಕ ತನ್ನ ತೀರ ಸಮೀಪಕ್ಕೆ ಬಂದಿದ್ದು,ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ಓರ್ವ ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.
ದೂರುಗಳಿಗೆ ಉತ್ತರಿಸಿರುವ ಸಮಿತಿಯು,ಆರೋಪವನ್ನು ಮೇಲ್ನೋಟಕ್ಕೆ ರುಜುವಾತುಗೊಳಿಸುವ ಯಾವುದೇ ಸಾಕ್ಷಾಧಾರ ತನಗೆ ಲಭಿಸಿಲ್ಲ ಎಂದು ತಿಳಿಸಿದ್ದು,ಸೂಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಯುವತಿಯರಿಗೆ ಸೂಚಿಸಿದೆ.