ಆಧಾರ್ ಮಾಹಿತಿ ರಕ್ಷಣೆಗೆ ಹೆಚ್ಚಿನ ಮಹತ್ವ : ಪ್ರಸಾದ್

Update: 2018-07-20 15:17 GMT

ಹೊಸದಿಲ್ಲಿ, ಜು.20: ಆಧಾರ್ ಮಾಹಿತಿಯ ಸುರಕ್ಷತೆಗೆ ಸರಕಾರ ಮಹತ್ವ ನೀಡುತ್ತಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಮಾಹಿತಿ ರಕ್ಷಣೆಯ ಕುರಿತು ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ತಜ್ಞರ ಸಮಿತಿಯ ವರದಿಗಾಗಿ ಸರಕಾರ ಕಾಯುತ್ತಿದೆ . ಆಧಾರ್‌ಗೆ ಈಗ ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಕಾನೂನಿನ ಬೆಂಬಲವಿದೆ . ಬಲಿಷ್ಟ ಭದ್ರತಾ ವ್ಯವಸ್ಥೆಯನ್ನು ಹೊಂದಿದ್ದು ಗೋಪ್ಯತೆ ಕಾಯ್ದುಕೊಳ್ಳಲಾಗುತ್ತಿದೆ . ವಿಶ್ವಬ್ಯಾಂಕ್ ಹಾಗೂ ಐಎಂಎಫ್‌ಗಳು ಕೂಡಾ ಆಧಾರ್ ಗುರುತು ಪತ್ರ ಆಡಳಿತ ಮತ್ತು ವಿತರಣಾ ವ್ಯವಸ್ಥೆಯ ಅತ್ಯುತ್ತಮ ಸಾಧನವಾಗಿದೆ ಎಂದು ಪರಿಗಣಿರುವುದಾಗಿ ಸಚಿವ ಪ್ರಸಾದ್ ತಿಳಿಸಿದ್ದಾರೆ.

ಇಂದಿನ ದಿನದಲ್ಲಿ ಭಾರತವು ಡಿಜಿಟಲ್ ತಂತ್ರಜ್ಞಾನದ ಶಕ್ತಿಯಾಗಿ ಗುರುತಿಸಿಕೊಂಡಿದೆ. ಗೋಪ್ಯತೆಯ ಹಕ್ಕನ್ನು ನಾವು ಸಂಪೂರ್ಣ ಪರಿಗಣಿಸುತ್ತೇವೆ. ಆದರೆ ಭ್ರಷ್ಟರ ಅಥವಾ ಭಯೋತ್ಪಾದಕರ ಮನವಿಯನ್ನು ಪರಿಗಣಿಸಲಾಗದು. ತಮ್ಮ ಮಾಹಿತಿಗಳನ್ನು ಬಳಸಿಕೊಳ್ಳಲು ಸಾಮಾಜಿಕ ಮಾಧ್ಯಮಗಳಿಗೆ ಸಂಪೂರ್ಣ ಅನುಮತಿ ನೀಡಬಾರದು ಎಂದು ಜನತೆಯಲ್ಲಿ ಮನವಿ ಮಾಡಿಕೊಂಡರು. ಆಧಾರ್ ಕಾರ್ಡನ್ನು 121.65 ಕೋಟಿ ಜನತೆಗೆ ವಿತರಿಸಲಾಗಿದ್ದು ಪ್ರತಿದಿನ 3.5 ಕೋಟಿ ಜನತೆ ದೃಢೀಕರಣ ಮಾಡಿಕೊಳ್ಳುತ್ತಿದ್ದಾರೆ. 2018ರ ಜೂನ್ 30ರವರೆಗೆ 60.22 ಕೋಟಿ ಜನತೆ ಆಧಾರ್ ಜೋಡಿತ ಬ್ಯಾಂಕ್ ಖಾತೆಗಳ ಮೂಲಕ ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಸಚಿವರು ತಿಳಿಸಿದರು. ಅಲ್ಲದೆ ವರ್ಚುವಲ್ ಐಡಿಯನ್ನು ಗುರುತು ಪತ್ರವಾಗಿ ಹೊಂದಿರಲು ಬಯಸುವವರು ಅದನ್ನು ಮುಂದುವರಿಸಲು ಅಡ್ಡಿಯಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News