ಎರಡನೇ ಟೆಸ್ಟ್: ಲಂಕಾ ಮೇಲೆ ಮಹಾರಾಜ್ ಸವಾರಿ

Update: 2018-07-20 18:45 GMT

ಕೊಲಂಬೊ, ಜು.20: ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧ ಆತಿಥೇ ಯ ಶ್ರೀಲಂಕಾ ಎರಡನೇ ಟೆಸ್ಟ್‌ನ ಮೊದಲ ದಿನ ಕೇಶವ್ ಮಹಾರಾಜ್ ದಾಳಿಗೆ ಸಿಲುಕಿ ಸಾಧಾರಣ ಮೊತ್ತ ದಾಖಲಿಸಿದೆ.

ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ದಿನದಾಟದಂತ್ಯಕ್ಕೆ 86 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 277 ರನ್ ಗಳಿಸಿತು. ಅಖಿಲಾ ಧನಂಜಯ್ 16 ರನ್ ಮತ್ತು ರಂಗನ್ ಹೆರಾತ್ ಇನ್ನೂ ಖಾತೆ ತೆರೆಯದೆ ಬ್ಯಾಟಿಂಗ್‌ನ್ನು ಎರಡನೇ ದಿನಕ್ಕೆ ಕಾಯ್ದಿರಿಸಿದ್ದಾರೆ. ಲಂಕಾದ ಧನಂಜಯ್ ಡಿ ಸಿಲ್ವ 60 ರನ್ (109ಎ, 8ಬೌ) ಗಳಿಸಿ ತಂಡಕ್ಕೆ ಗರಿಷ್ಠ ವೈಯಕ್ತಿಕ ಕೊಡುಗೆ ನೀಡಿದರು. ಧನಂಜಯ್ ಡಿ ಸಿಲ್ವ, ಧನುಷ್ಕ ಗುಣತಿಲಕ ಮತ್ತು ಕರುಣರತ್ನೆ ಅರ್ಧಶತಕಗಳನ್ನು ದಾಖಲಿಸಿದರು.

ಶ್ರೀಲಂಕಾದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು. ಆದರೆ ಬಳಿಕ ಮಹಾರಾಜ್ ಲಂಕೆಯ ಬೆನ್ನಲುಬು ಮುರಿದರು. 8 ಮಂದಿ ದಾಂಡಿಗರು ಮಹಾರಾಜ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

ಧನುಷ್ಕ ಗುಣತಿಲಕ ಮತ್ತು ದಿಮುತ್ ಕರುಣರತ್ನೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 116 ರನ್ ಸೇರಿಸಿದರು. ಕೇಶವ್ ಮಹಾರಾಜ್ ಮತ್ತು ಏಡೆನ್ ಮಕ್ರಮ್ ಮೊದಲ ಅವಧಿಯಲ್ಲಿ ಹೆಚ್ಚು ಬೌಲಿಂಗ್ ನಡೆಸಲಿಲ್ಲ. ಗುಣತಿಲಕ ಮತ್ತು ಕರುಣರತ್ನೆ ಅರ್ಧಶತಕಗಳನ್ನು ದಾಖಲಿಸಿದರು. ಎರಡನೇ ಅವಧಿಯಲ್ಲಿ ಕೇಶವ ಮಹಾರಾಜ್ ಅವರನ್ನು ನಾಯಕ ಎಫ್ ಡು ಪ್ಲೆಸಿಸ್ ದಾಳಿಗಿಳಿಸಿದರು.ಅವರ ದಾಳಿ ಫಲ ನೀಡಿತು. 36.3ನೇ ಓವರ್‌ನಲ್ಲಿ ಕರುಣ್‌ರತ್ನೆ ಅವರು ಮಹಾರಾಜ್ ಬೌಲಿಂಗ್‌ನಲ್ಲಿ ಡಿ ಕಾಕ್‌ಗೆ ಕ್ಯಾಚ್ ನೀಡಿದರು. ಅವರು 53 ರನ್(110ಎ, 4ಬೌ) ಗಳಿಸಿದರು.ಒಂದು ಹಂತದಲ್ಲಿ ವಿಕೆಟ್ ನಷ್ಟವಿ ಲ್ಲದೆ 116 ರನ್ ಗಳಿಸಿದ್ದ ಶ್ರೀಲಂಕಾ ಮಹಾರಾಜ್ ದಾಳಿಗೆ ಸಿಲುಕಿ ಮತ್ತೆ 161 ರನ್ ಸೇರಿಸುವ ಹೊತ್ತಿಗೆ 9 ವಿಕೆಟ್ ಕಳೆದು ಕೊಂಡಿತು. ಮಹಾರಾಜ್ ಅವರ ಮುಂದಿನ ಓವರ್‌ನಲ್ಲಿ (36.3) ಗುಣತಿಲಕ ಔಟಾಗಿ ಪೆವಿಲಿಯನ್ ಹಾದಿ ಹಿಡಿದರು. ಗುಣತಿಲಕ 57 ರನ್(107ಎ, 6ಬೌ) ಗಳಿಸಿದರು.ಆಗ ತಂಡದ ಸ್ಕೋರ್ 36.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 117 ಆಗಿತ್ತು.

ಕುಸಲ್ ಮೆಂಡಿಸ್ ಮತ್ತು ಧನಂಜಯ ಡಿ ಸಿಲ್ವ ಮೂರನೇ ವಿಕೆಟ್‌ಗೆ 36 ರನ್ ಸೇರಿಸಿದರು. ಮೆಂಡಿಸ್ 21 ರನ್ ಗಳಿಸಿ ಮಹಾರಾಜ್ ಎಸೆತದಲ್ಲಿ ರಬಾಡಗೆೆ ವಿಕೆಟ್ ಒಪ್ಪಿಸಿದರು.

ಆ್ಯಂಜೆಲೊ ಮ್ಯಾಥ್ಯುಸ್ ಕೇವಲ 10 ರನ್ ಗಳಿಸಿ ಔಟಾದರು. ಆದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 5,000 ರನ್‌ಗಳ ಮೈಲುಗಲ್ಲನ್ನು ಮುಟ್ಟಿದರು. ರೋಶನ್ ಡಿ ಸಿಲ್ವ 5ನೇ ವಿಕೆಟ್‌ಗೆ ಧನಂಜಯ್ ಡಿ ಸಿಲ್ವಗೆ ಸಾಥ್ ನೀಡಿದರು. ಇವರು ಜೊತೆಯಾಗಿ 54 ರನ್ ಜಮೆ ಮಾಡಿದರು.

ರೋಶನ್ ಡಿ ಸಿಲ್ವ(22) ಅವರು 77ನೇ ಓವರ್‌ನ ಕೊನೆಯ ಎಸೆತದಲ್ಲಿ ರಬಾಡಗೆ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಬಳಿಕ ನಿರೋಶನ್ ಡಿಕ್ವೆಲ್ಲಾ (5), ಧನಂಜಯ್ ಡಿ ಸಿಲ್ವ (60) ದಿಲ್ರುವಾನ್ ಪೆರೆರಾ (17) ಮತ್ತು ಸುರಂಗ ಲಕ್ಮಲ್(0) ಅವರು ಮಹಾರಾಜ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News