ಮೋದಿಯನ್ನು ಫ್ರಾನ್ಸ್‌ಗೆ, ರಾಹುಲ್‌ರನ್ನು ಕ್ರೊಯೇಷಿಯಾಕ್ಕೆ ಹೋಲಿಸಿದ ಶಿವಸೇನೆ ಹೇಳಿದ್ದೇನು?

Update: 2018-07-21 15:05 GMT

ಮುಂಬೈ,ಜು.21: ಅವಿಶ್ವಾಸ ನಿರ್ಣಯವನ್ನು ಫಿಫಾ ವಿಶ್ವಕಪ್ ಅಂತಿಮ ಪಂದ್ಯಕ್ಕೆ ಹೋಲಿಸಿರುವ ಶಿವಸೇನೆಯು,ಫ್ರಾನ್ಸ್‌ನಂತೆ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿರಬಹುದು,ಆದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರನ್ನರ್ಸ್ ಅಪ್ ಕ್ರೊಯೇಷಿಯಾದಂತೆ ಹಲವು ಹೃದಯಗಳನ್ನು ಗೆದ್ದಿದ್ದಾರೆ ಎಂದು ಹೇಳಿದೆ.

ಶನಿವಾರ ಇಲ್ಲಿ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತಿದ್ದ ಶಿವಸೇನೆಯ ವಕ್ತಾರ ಸಂಜಯ ರಾವತ್ ಅವರು,ವಿಶ್ವಕಪ್ ಫುಟ್ಬಾಲ್‌ನ ಅಂತಿಮ ಪಂದ್ಯದಲ್ಲಿ ಫ್ರಾನ್ಸ್ ಪ್ರಶಸ್ತಿಯನ್ನು ಗೆದ್ದಿದೆ,ಆದರೆ ತಾನು ಆಡಿದ ರೀತಿಗಾಗಿ ಕ್ರೊಯೇಷಿಯಾ ನೆನಪಿನಲ್ಲುಳಿದಿದೆ. ರಾಹುಲ್ ಕುರಿತು ಈಗ ಇಂತಹುದೇ ಮಾತುಗಳು ಕೇಳಿಬರುತ್ತಿವೆ. ಇಂತಹ ರಾಜಕೀಯ ಆಟವನ್ನು ಆಡುವ ವ್ಯಕ್ತಿ ಐದು ಹೆಜ್ಜೆ ಮುಂದಿರುತ್ತಾನೆ ಎಂದು ಹೇಳಿದರು.

ರಾಹುಲ್‌ರಿಂದ ಮೋದಿಯವರ ಆಲಿಂಗನಕ್ಕೆ ಪ್ರತಿಕ್ರಿಯಿಸಿದ ಅವರು,ಇಂತಹ ಚರ್ಯೆಗಳು ಗಮನ ಸೆಳೆಯುವ ಉದ್ದೇಶವನ್ನು ಹೊಂದಿರುತ್ತವೆ. ಮೋದಿಯವರಿಗೆ ಆಘಾತ ನೀಡಲು ರಾಹುಲ್ ಹಾಗೆ ಮಾಡಿದ್ದರೆ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಸಂದರ್ಭದಲ್ಲಿ ರಾಹುಲ್‌ರ ಹೊಸ ಅವತಾರಕ್ಕಾಗಿ ಅವರನ್ನು ಅಭಿನಂದಿಸಬೇಕು. ರೈತರ ಸಂಕಷ್ಟಗಳಿಂದ ಹಿಡಿದು ರಫೇಲ್ ಯುದ್ಧ ವಿಮಾನಗಳ ಖರೀದಿವರೆಗೆ ಹಲವಾರು ವಿಷಯಗಳಲ್ಲಿ ಅವರು ಮೋದಿ ಸರಕಾರದ ವಿರುದ್ಧ ತೀಕ್ಷ್ಣ ದಾಳಿ ನಡೆಸಿದ್ದಾರೆ ಎಂದು ಹೇಳಿದ ರಾವತ್,ಮೋದಿಯವರ ಭಾಷಣ ಓರ್ವ ಪ್ರಧಾನಿಯ ಭಾಷಣದಂತಿತ್ತು. ಮೋದಿ ಎಂದರೆ ಮೋದಿ,ಅವರನ್ನು ಇನ್ಯಾರ ಜೊತೆಗೂ ಹೋಲಿಸುವುದು ಸರಿಯಲ್ಲ. ಆದರೆ ರಾಹುಲ್ ಅವರ ಭಾಷಣವನ್ನೂ ಅದೇ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News