ಮಿಷನರೀಸ್ ಆಫ್ ಚಾರಿಟಿ ಹೋಮ್ಸ್‌ಗಳ ತನಿಖೆ ನಡೆಸಲು ಕೇಂದ್ರದ ಸೂಚನೆ

Update: 2018-07-21 15:33 GMT

ಹೊಸದಿಲ್ಲಿ, ಜು.21: ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಾಧ್ಯತೆಯಿರುವ ಸಂಸ್ಥೆಗಳು ಹಾಗೂ ಸಂಘಟನೆಗಳನ್ನು ಗುರುತಿಸುವಂತೆ ಹಾಗೂ ಮಿಷನರೀಸ್ ಆಫ್ ಚಾರಿಟಿ ಹೋಮ್ಸ್ ನಡೆಸಿಕೊಂಡು ಬರುತ್ತಿರುವ ಎಲ್ಲಾ ಅನಾಥಾಶ್ರಮಗಳ ತನಿಖೆ ನಡೆಸುವಂತೆ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ(ಡಬ್ಲುಸಿಡಿ) ತಿಳಿಸಿದೆ.

ಅಲ್ಲದೆ ಅಕ್ರಮ ಚಟುವಟಿಕೆ ಹಾಗೂ ಮಕ್ಕಳ ಕಳ್ಳಸಾಗಣೆಯ ಸಾಧ್ಯತೆಯಿರುವ ಹೆರಿಗೆ ಆಸ್ಪತ್ರೆ ಹಾಗೂ ಇತರ ವ್ಯವಸ್ಥೆಗಳ ಮೇಲೆ ನಿಕಟ ನಿಗಾ ಇರಿಸುವಂತೆ ಮತ್ತು ಯಥಾಸ್ಥಿತಿ ವರದಿಯನ್ನು ಈ ತಿಂಗಳಾಂತ್ಯದೊಳಗೆ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಎಲ್ಲಾ ನೋಂದಾಯಿತ ಶಿಶು ಸುರಕ್ಷಾ ಸಂಸ್ಥೆಗಳು (ಸರಕಾರಿ ಅಧೀನದ ಅಥವಾ ಎನ್‌ಜಿಒ ಸಂಘಟನೆ, ವ್ಯಕ್ತಿಗಳ ಆಡಳಿತವಿರುವ) ವಿಶೇಷ ದತ್ತು ಏಜೆನ್ಸಿಗಳ ಜೊತೆ ಸಂಪರ್ಕ ಸಾಧಿಸುವಂತೆ ಹಾಗೂ ಆನ್‌ಲೈನ್ ಪೋರ್ಟಲ್ ಗಳಲ್ಲಿ ಒಂದು ತಿಂಗಳೊಳಗೆ ಜೋಡಣೆಯಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಇಲಾಖೆಯು ರಾಜ್ಯ ಸರಕಾರ, ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ‘ ದಿ ಚೈಲ್ಡ್ ಅಡಾಪ್ಷನ್ ರಿಸೋರ್ಸ್ ಇನ್‌ಫಾರ್ಮೇಶನ್ ಆ್ಯಂಡ್ ಗೈಡೆನ್ಸ್ ಸಿಸ್ಟಮ್ ಎಂಬುದು ದತ್ತು ಪ್ರಕ್ರಿಯೆಯ ಸೇವೆ ಒದಗಿಸುವ ಆ್ಯಪ್ ಆಗಿದ್ದು ಇದು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ (ಸಿಎಆರ್‌ಎ)ಕ್ಕೆ ಜೋಡಣೆಗೊಂಡಿದೆ. ಅಲ್ಲದೆ ಈ ಸೂಚನೆಯನ್ನು ಸ್ಥಳೀಯ ದಿನಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಸಂಸ್ಥೆಗಳು ನಿಗದಿತ ಅವಧಿಯೊಳಗೆ ಸೂಚನೆಯನ್ನು ಪಾಲಿಸಲು ಕ್ರಮ ಕೈಗೊಳ್ಳುವಂತೆಯೂ, ಸೂಚನೆ ಪಾಲಿಸದ ಸಂಸ್ಥೆಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಇಲಾಖೆ ತಿಳಿಸಿದೆ.

2015ರ ಬಾಲನ್ಯಾಯ ಕಾಯ್ದೆಯನ್ನು ಉಲ್ಲಂಘಿಸಿರುವ ಕೆಲವು ಅನಾಥಾಶ್ರಮಗಳು ಕಾನೂನುಬಾಹಿರ ದತ್ತು ಪ್ರಕ್ರಿಯೆ ನಡೆಸುತ್ತಿವೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಇಲಾಖೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ಮಿಷನರೀಸ್ ಆಫ್ ಚಾರಿಟೀಸ್ ನಡೆಸಿಕೊಂಡು ಬರುತ್ತಿರುವ ಶಿಶು ಸುರಕ್ಷಾಲಯಗಳು ನಾಲ್ಕು ಶಿಶುಗಳನ್ನು ಮಾರಾಟ ಮಾಡಿವೆ ಎಂದು ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದರೆ ಈ ಆರೋಪವನ್ನು ಮಿಷನರೀಸ್ ಆಫ್ ಚಾರಿಟಿ ಸಂಸ್ಥೆ ನಿರಾಕರಿಸಿದೆ. ದತ್ತು ಪ್ರಕ್ರಿಯೆಯ ಕುರಿತು ಸರಕಾರ 2015ರಲ್ಲಿ ಪರಿಷ್ಕೃತ ಮಾರ್ಗದರ್ಶಿ ಸೂತ್ರವನ್ನು ಪ್ರಕಟಿಸಿದ ಬಳಿಕ ಇಲಾಖೆ ಹಾಗೂ ಮಿಷನರೀಸ್ ಆಫ್ ಚಾರಿಟೀಸ್ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ತಲೆದೋರಿತ್ತು. ಏಕ ಪೋಷಕರಿಗೆ, ವಿಚ್ಛೇದಿತ ಪೋಷಕರಿಗೆ ಮಗು ದತ್ತು ನೀಡಲು ಮಿಷನರೀಸ್ ಆಫ್ ಚಾರಿಟೀಸ್ ನಿರಾಕರಿಸಿತ್ತು. ಪರಿಷ್ಕೃತ ಮಾರ್ಗದರ್ಶಿ ಸೂತ್ರವನ್ನು ಪಾಲಿಸಲು ನಿರಾಕರಿಸುವ ಸಂಸ್ಥೆಗಳ ಮಾನ್ಯತೆ ರದ್ದುಗೊಳಿಸುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಮೇನಕಾ ಗಾಂಧಿ ಎಚ್ಚರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News