ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿತ : ಇಲ್ಲಿದೆ ಸಂಪೂರ್ಣ ವಿವರ

Update: 2018-07-21 15:47 GMT

ಹೊಸದಿಲ್ಲಿ, ಜು.21: ಸ್ಯಾನಿಟರಿ ಪ್ಯಾಡ್‌ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಬೇಕೆಂಬ ನಿರಂತರ ಬೇಡಿಕೆಗಳಿಗೆ ಕಡೆಗೂ ಜಿಎಸ್‌ಟಿ ಸಮಿತಿ ಅಸ್ತು ಎಂದಿದ್ದು ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ. ಹಲವು ದೈನಂದಿನ ಬಳಕೆಯ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸಲಾಗಿದೆ ಎಂದು ವಿತ್ತ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

   ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಎಸ್‌ಟಿ ಸಮಿತಿಯ 28ನೇ ಸಭೆಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಸ್ಯಾನಿಟರಿ ಪ್ಯಾಡ್‌ಗಳ ಜೊತೆಗೆ ರಾಖಿಗೂ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಪಾದರಕ್ಷೆ, ಸಣ್ಣ ಟಿವಿ ಸೆಟ್‌ಗಳು, ವಾಟರ್ ಹೀಟರ್‌ಗಳು, ಇಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ರೆಫ್ರಿಜರೇಟರ್‌ಗಳು, ಲಿಥಿಯಮ್ ಇಯಾನ್ ಬ್ಯಾಟರಿಗಳು, ಹೇರ್ ಡ್ರೈಯರ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು, ಇಥನಾಲ್, ಆಹಾರ ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿಮೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ವರ್ಗೀಕರಣ ವಿವಾದವನ್ನು ತಪ್ಪಿಸುವ ಉದ್ದೇಶದಿಂದ ಹದಗೊಳಿಸಿದ ಕೋಟಾ ಸ್ಟೋನ್, ಸ್ಯಾಂಡ್ ಸ್ಟೋನ್ ಹಾಗೂ ಸ್ಥಳೀಯ ಕಲ್ಲುಗಳ ಮೇಲೆ ವಿಧಿಸಲಾಗುತ್ತಿದ್ದ ಜಿಎಸ್‌ಟಿಯನ್ನು ಶೇ.18ರಿಂದ 12ಕ್ಕೆ ಇಳಿಸಲಾಗಿದೆ . ಶೇ.5ರ ಜಿಎಸ್‌ಟಿ ತೆರಿಗೆ ವ್ಯಾಪ್ತಿಗೆ ಒಳಪಡುವ ಪಾದರಕ್ಷೆಗಳ ಬೆಲೆಯ ಮಿತಿಯನ್ನು 500 ರೂ.ಯಿಂದ 1,000 ರೂ.ಗೆ ವಿಸ್ತರಿಸಲಾಗಿದೆ. ಮಧ್ಯಮ ವರ್ಗದ ಜನತೆ ಬಳಸುವ ಪೈಂಟ್‌ಗಳು, ರೆಪ್ರಿಜರೇಟರ್‌ಗಳು, ವಾಷಿಂಗ್ ಮಿಷನ್‌ಗಳು, ವ್ಯಾಕ್ಯೂಮ್ ಕ್ಲೀನರ್‌ಗಳು, ಸ್ಟೋರೇಜ್ ವಾಟರ್ ಹೀಟರ್‌ಗಳು, 68 ಸೆ.ಮೀ. ಗಾತ್ರದ ಟಿ.ವಿ.ಸೆಟ್‌ಗಳ ತೆರಿಗೆ ಮಿತಿಯನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲಾಗಿದೆ. ಜಿಎಸ್‌ಟಿ ಸಮಿತಿಯ ಮುಂದಿನ ಸಭೆ ಆಗಸ್ಟ್ 4ರಂದು ನಡೆಯಲಿದೆ ಎಂದು ಸಚಿವರು ತಿಳಿಸಿದರು.

ಶನಿವಾರ ನಡೆದ ಜಿಎಸ್‌ಟಿ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಸಚಿವ ಪಿಯೂಷ್ ಗೋಯಲ್ ವಹಿಸಿದ್ದರು. ಈ ಮಧ್ಯೆ ಹೇಳಿಕೆ ನೀಡಿರುವ ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಶೇ.28ರ ತೆರಿಗೆ ಹಂತವನ್ನೇ ರದ್ದುಗೊಳಿಸುವ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ಜಿಎಸ್‌ಟಿ ಸಮಿತಿ ಸಭೆಯಲ್ಲಿ 5 ಕೋಟಿ ರೂ.ನಷ್ಟು ವಹಿವಾಟು ನಡೆಸುವ ವರ್ತಕರು ತ್ರೈಮಾಸಿಕ ತೆರಿಗೆ ರಿಟರ್ನ್ಸ್ ಸಲ್ಲಿಸುವ ಪ್ರಸ್ತಾವನೆಗೂ ಅನುಮೋದನೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ.

ದೀರ್ಘಾವಧಿಯ ಬೇಡಿಕೆ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕೆಂಬುದು ಸುದೀರ್ಘಾವಧಿಯ ಬೇಡಿಕೆಯಾಗಿತ್ತು. ಈ ಬೇಡಿಕೆಗೆ ಪೂರಕವಾಗಿ ಗ್ವಾಲಿಯರ್‌ನ ವಿದ್ಯಾರ್ಥಿನಿಯರ ಗುಂಪೊಂದು ಈ ವರ್ಷದ ಜನವರಿಯಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದರು. ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿರಿಸಬೇಕೆಂಬ ಸಂದೇಶವನ್ನು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಬರೆದು ಪ್ರಧಾನಿ ಮೋದಿಯವರಿಗೆ ರವಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News