ಪ್ರೀತಿ ಅನುಕಂಪದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ:ರಾಹುಲ್

Update: 2018-07-21 17:17 GMT

ಹೊಸದಿಲ್ಲಿ,ಜು.21: ಜನರ ಪ್ರೀತಿ ಮತ್ತು ಅನುಕಂಪದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶನಿವಾರ ಹೇಳಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ನಡೆದಿದ್ದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಪ್ರಧಾನಿ ನರೇಂದ್ರ ಮೋದಿಯವರು ತನ್ನ ವಾದವನ್ನು ಸಮರ್ಥಿಸಿಕೊಳ್ಳಲು ಕೆಲವರ ಹೃದಯಗಳಲ್ಲಿನ ದ್ವೇಷ,ಭೀತಿ ಮತ್ತು ಸಿಟ್ಟನ್ನು ಬಳಸಿಕೊಳ್ಳುವುದರ ಕುರಿತಾಗಿತ್ತು ಮತ್ತು ಕಾಂಗ್ರೆಸ್ ಪ್ರೀತಿ ಮತ್ತು ಅನುಕಂಪದ ಮೂಲಕ ಇದನ್ನು ಎದುರಿಸುತ್ತಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆ ಸಂದರ್ಭದಲ್ಲಿ 45 ನಿಮಿಷಗಳ ಕಾಲ ಅಬ್ಬರದ ಭಾಷಣ ಮಾಡಿದ್ದ ರಾಹುಲ್ ಮೋದಿ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದರು. ಭಾಷಣ ಅಂತ್ಯಗೊಂಡ ಬಳಿಕ ಮೋದಿಯವರ ಬಳಿಗೆ ತೆರಳಿ ಅವರನ್ನು ಅಪ್ಪಿಕೊಂಡಿದ್ದರು. ಆರಂಭದಲ್ಲಿ ಮುಜುಗರಗೊಂಡವರಂತೆ ಕಂಡು ಬಂದಿದ್ದ ಮೋದಿ ತಕ್ಷಣ ಚೇತರಿಸಿಕೊಂಡು ರಾಹುಲ್‌ರನ್ನು ವಾಪಸ್ ಕರೆದು ಅವರ ಬೆನ್ನು ತಟ್ಟಿದ್ದರು. ಈ ವೇಳೆಗೆ ಅವರು ಏನೋ ಹೇಳಿದ್ದರಾದರೂ ಅದು ಕೇಳಿಸಿರಲಿಲ್ಲ.

ಚರ್ಚೆಗೆ ಉತ್ತರವಾಗಿ ತನ್ನ ಭಾಷಣದಲ್ಲಿ ಮೋದಿ ರಾಹುಲ್ ತನ್ನ ವಿರುದ್ಧ ಮಾಡಿದ್ದ ಆರೋಪಗಳಿಗೆ ತಿರುಗೇಟು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News