ರಾಹುಲ್‌ ‘ಆಲಿಂಗನ’ದ ಬಗ್ಗೆ ಪ್ರತಿಕ್ರಯಿಸಿದ ಪ್ರಧಾನಿ ಮೋದಿ

Update: 2018-07-21 16:47 GMT

 ಶಹಜಾನಪುರ(ಉ.ಪ್ರ),ಜು.21: ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯ ಸಂದರ್ಭದಲ್ಲಿ ತನಗೆ ‘ಬೇಡವಾಗಿದ್ದ ಆಲಿಂಗನ’ವನ್ನು ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಶನಿವಾರ ಇಲ್ಲಿ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿಯವರು,ಬಿಜೆಪಿ ವಿರುದ್ಧ ಹಲವಾರು ಪಕ್ಷಗಳು ಒಂದಾಗುತ್ತಿರುವುದು ‘ಕಮಲ’ ಅರಳಲು ನೆರವಾಗಲಿದೆ ಎಂದು ಹೇಳಿದರು.

ಅವಿಶ್ವಾಸ ನಿರ್ಣಯ ಮಂಡಿಸಿದ್ದಕ್ಕೆ ಕಾರಣಗಳನ್ನು ನೀಡುವಂತೆ ನಾವು ಕೇಳಿದ್ದೆವು,ಆದರೆ ಅದಕ್ಕೆ ವಿಫಲರಾದ ಅವರು ಬೇಡವಾದ ಆಲಿಂಗನವನ್ನು ನೀಡಿದರು ಎಂದು ಇಲ್ಲಿ ಕಿಸಾನ್ ಕಲ್ಯಾಣ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ಮೋದಿ ಕುಟುಕಿದರು.

 ಬಿಜೆಪಿಯ ವಿರುದ್ಧ ಒಂದು ‘ದಳ(ಪಕ್ಷ)’ ಮಾತ್ರವಲ್ಲ,ಹಲವಾರು ಪಕ್ಷಗಳು ಸೇರಿಕೊಂಡಿವೆ. ಇವೆಲ್ಲವೂ ‘ದಳ-ದಳ(ಕೆಸರು)’ವನ್ನು ಸೃಷ್ಟಿಸುತ್ತವೆ ಮತ್ತು ಅದು ‘ಕಮಲ’ವು ಅರಳಲು ನೆರವಾಗುತ್ತದೆ ಎಂದು ಮೋದಿ ಕುಹಕವಾಡಿದರು..

ಬಿಜೆಪಿಯ ವಿರುದ್ಧ್ದ ಹಲವಾರು ಪಕ್ಷಗಳು ಒಂದಾಗುತ್ತಿರುವುದು ಪಕ್ಷಕ್ಕೆ ಒಳ್ಳೆಯ ಅವಕಾಶವಾಗಿದೆ ಎಂದು ಮೋದಿ ನುಡಿದರು.

ಪ್ರತಿಪಕ್ಷಗಳನ್ನು ತರಾಟೆಗೆತ್ತಿಕೊಂಡ ಅವರು,ಅವು ಬಡವರು,ಯುವಜನರು ಮತ್ತು ರೈತರನ್ನು ಕಡೆಗಣಿಸಿವೆ ಮತ್ತು ಪ್ರಧಾನಿ ಕುರ್ಚಿಯ ಹಿಂದೆ ಬಿದ್ದಿವೆ ಎಂದು ಟೀಕಿಸಿದರು.

ತಾನೇನಾದರೂ ತಪ್ಪು ಮಾಡಿದ್ದೇನೆಯೇ? ತಾನು ಕೇವಲ ಬಡವರು ಮತ್ತು ದೇಶಕ್ಕಾಗಿ ಶ್ರಮಿಸುತ್ತಿದ್ದೇನೆ. ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ. ಇದು ತನ್ನ ಅಪರಾಧವಾಗಿದೆ ಎಂದು ಅವರು ಹೇಳಿದರು.

ಹಿಂದಿನ ಸರಕಾರಗಳಿಗೆ ರೈತರಿಗೆ ನೆರವಾಗುವ ಮನಸ್ಸು ಇದ್ದಿರಲಿಲ್ಲ ಎಂದು ಆರೋಪಿಸಿದ ಅವರು ರೈತರ ಏಳಿಗೆಗಾಗಿ ತನ್ನ ಸರಕಾರವು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳನ್ನು ಪಟ್ಟಿ ಮಾಡಿದರು. ಹಿಂದೆ ದೇಶವನ್ನಾಳಿದ್ದ ಪಕ್ಷಗಳು ರೈತಪರ ಧೋರಣೆಗಳನ್ನು ಹೊಂದಿರಲಿಲ್ಲ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News