‘ಬಿಜೆಪಿ ತೊಲಗಿಸಿ’ ಅಭಿಯಾನಕ್ಕೆ ಆಗಸ್ಟ್ 15ರಂದು ಚಾಲನೆ : ಮಮತಾ ಬ್ಯಾನರ್ಜಿ

Update: 2018-07-21 17:04 GMT

ಕೋಲ್ಕತಾ, ಜು.21: ಸಮಾನಮನಸ್ಕ ವಿಪಕ್ಷ ನಾಯಕರ ಸಹಕಾರದೊಂದಿಗೆ ಆಗಸ್ಟ್ 15ರಂದು ‘ಬಿಜೆಪಿ ತೊಲಗಿಸಿ, ದೇಶ ಉಳಿಸಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಟಿಎಂಸಿ ನಾಯಕಿ, ಪಶ್ಚಿಮಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. 2019ರ ಲೋಕಸಭಾ ಚುನಾವಣೆ ಎನ್‌ಡಿಎಗೆ ಭಾರೀ ಹೊಡೆತ ನೀಡಲಿದ್ದು ಬಂಗಾಳವು ಇದಕ್ಕೆ ಮುನ್ನುಡಿ ಬರೆಯಲಿದೆ . ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಪಶ್ಚಿಮಬಂಗಾಲದ ಎಲ್ಲಾ 42 ಸ್ಥಾನಗಳಲ್ಲೂ ಗೆಲುವು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 ದೇಶದಾದ್ಯಂತ ನಡೆಯುತ್ತಿರುವ ಗುಂಪು ಹಲ್ಲೆ ಮತ್ತು ಹಿಂಸಾಚಾರವನ್ನು ಖಂಡಿಸಿದ ಬ್ಯಾನರ್ಜಿ, ಜನರನ್ನು ಎಲ್ಲೆಡೆ ಥಳಿಸಲಾಗುತ್ತಿರುವುದನ್ನು ನೋಡಿದರೆ ಅವರು (ಬಿಜೆಪಿಯವರು) ಜನರಲ್ಲಿ ತಾಲಿಬಾನೀಯರನ್ನು ಸೃಷ್ಟಿಸಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ನಲ್ಲಿರುವ ಕೆಲವು ಉತ್ತಮ ವ್ಯಕ್ತಿಗಳನ್ನು ನಾನು ಗೌರವಿಸುತ್ತೇನೆ. ಆದರೆ ಇತರರು ಕೊಳಕು ಆಟವಾಡುತ್ತಿದ್ದಾರೆ ಎಂದವರು ಹೇಳಿದರು.

ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಚಂದನ್ ಮಿತ್ರ ಹಾಗೂ ನಾಲ್ವರು ಕಾಂಗ್ರೆಸ್ ಶಾಸಕರು ಟಿಎಂಸಿ ಸೇರ್ಪಡೆಯಾದರು. 1993ರಲ್ಲಿ ಎಡಪಕ್ಷಗಳ ಆಡಳಿತವಿದ್ದ ಸಂದರ್ಭ ಪೊಲೀಸರ ಗೋಲಿಬಾರಿಗೆ ಬಲಿಯಾಗಿದ್ದಾರೆ ಎನ್ನಲಾದ 13 ಯುವಕಾಂಗ್ರೆಸ್ ಕಾರ್ಯಕರ್ತರ ಸ್ಮರಣಾರ್ಥ ಟಿಎಂಸಿ ಪ್ರತೀ ವರ್ಷ ಜುಲೈ 21ರಂದು ಹುತಾತ್ಮರ ದಿನ ಆಚರಿಸುತ್ತಿದೆ. ಘಟನೆ ನಡೆದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಯುವ ಕಾಂಗ್ರೆಸ್‌ನ ಮುಖಂಡರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News