ಅವಿಶ್ವಾಸ ನಿರ್ಣಯದ ದಿನವೇ ರೈತರಿಂದ ಮೋದಿ ಸರಕಾರದ ವಿರುದ್ಧ ಅವಿಶ್ವಾಸ ಜಾಥಾ

Update: 2018-07-21 17:32 GMT

 ಹೊಸದಿಲ್ಲಿ,ಜು.21: ಶುಕ್ರವಾರ ಸಂಸತ್‌ನಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಚರ್ಚೆ ನಡೆಯುತ್ತಿದ್ದರೆ ಇತ್ತ ಅಖಿಲ ಭಾರತ ಕಿಸಾನ ಸಂಘರ್ಷ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಹಲವಾರು ರಾಜ್ಯಗಳ ರೈತರು ನರೇಂದ್ರ ಮೋದಿ ಸರಕಾರದಲ್ಲಿ ತಮ್ಮ ಅವಿಶ್ವಾಸವನ್ನು ವ್ಯಕ್ತಪಡಿಸಲು ವಿವಿಧ ರಾಜ್ಯಗಳಿಂದ ಜಾಥಾದ ಮೂಲಕ ದಿಲ್ಲಿಯನ್ನು ತಲುಪಿದ್ದರು. ಪೊಲೀಸರು ಸಂಸತ್ತಿನಿಂದ ಒಂದು ಕಿ.ಮೀ.ದೂರದಲ್ಲಿಯೇ ಪ್ರತಿಭಟನಾಕಾರರನ್ನು ತಡೆದಿದ್ದರು.

ಮೋದಿ ನೇತೃತ್ವ ಸರಕಾರವು ಚುನಾವಣೆ ಸಂದರ್ಭ ರೈತರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಮರೆತಿದೆ ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯ ವಿಷಯದಲ್ಲಿ ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ದೇಶಾದ್ಯಂತದಿಂದ ಆಗಮಿಸಿದ್ದ ರೈತ ನಾಯಕರೊಡನೆ ಹಲವಾರು ರಾಜಕೀಯ ಮುಖಂಡರೂ ಜಾಥಾದಲ್ಲಿ ಪಾಲ್ಗೊಂಡಿದ್ದರು.

‘ನೇತಾ ರಾಜ್ ಜಾಯೇಗಾ,ಕಿಸಾನ್ ರಾಜ್ ಆಯೇಗಾ’ಎಂಬಿತ್ಯಾದಿ ಘೋಷಣೆಗಳಿದ್ದ ಭಿತ್ತಿಪತ್ರಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದ್ದರು.

ಯಾವುದೇ ಬೆಳೆಯನ್ನು ಬೆಳೆದರೂ ಲಾಭವಿಲ್ಲ. ಎಂಎಸ್‌ಪಿ ದೊರೆಯುವ ಗೋದಿ ಮತ್ತು ಭತ್ತದ ಬೆಳೆಗಳಲ್ಲಿಯೂ ತಮಗೆ ನಷ್ಟವಾಗುತ್ತಿದೆ. ತಮ್ಮ ಸಾಲಗಳು ಬೆಳೆಯುತ್ತಲೇ ಇವೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಲಾಭದಾಯಕ ಬೆಲೆಗಳನ್ನು ನೀಡಿರುವುದಾಗಿ ಮೋದಿ ಹೇಳುತ್ತಿದ್ದಾರೆ. ಆದರೆ ಅದೆಲ್ಲಿದೆ ಎಂದು ಪ್ರಶ್ನಿಸಿದರು.

ನಮ್ಮ ಮುಖದ ಮೇಲೆ ನಾವು ಮೂರ್ಖರೆಂದು ಬರೆದಿದೆಯೇ? ರೈತರಿಗೆ ಲಾಭದಾಯಕ ಬೆಲೆಗಳನ್ನು ನೀಡಿದ್ದೇವೆ ಎಂದು ಸರಕಾರವು ಹೇಳುತ್ತಿದೆ. ಹಾಗಿದ್ದರೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಂಜಾಬಿನ ರೈತ ಭಗತ್‌ಸಿಂಗ್ ಪ್ರಶ್ನಿಸಿದರು.

 ನಾನು ಭಗತ್‌ಸಿಂಗ್ ಎಂದು ಪ್ರತಿಯೊಬ್ಬರಿಗೂ ಹೇಳಿ ಎಂದು ಸುದ್ದಿಗಾರರಿಗೆ ತಿಳಿಸಿದ ಸಿಂಗ್, ನಾನು ಮಾತ್ರವಲ್ಲ,ಪಂಜಾಬಿನ ಪ್ರತಿಯೊಬ್ಬ ರೈತನೂ ಇಂದು ಹುತಾತ್ಮ ಭಗತ್‌ಸಿಂಗ್‌ರ ಆತ್ಮವಾಗಿದ್ದಾನೆ ಎಂದರು. ಭಗತ್ ಸಿಂಗ್‌ರ ಚಿತ್ರ ಮತ್ತು ‘ಬಹುಶಃ ನಾನು ವಾಪಸ್ ಬರಬೇಕಾಗಬಹುದು’ ಎಂಬ ಬರಹವಿದ್ದ ಭಿತ್ತಿಪತ್ರವನ್ನು ಅವರು ಪ್ರದರ್ಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News