ನಾಗರಹಾವು: ಪುಟ್ಟಣ್ಣನ ಪುಂಗಿಗೆ ಪ್ರೇಕ್ಷಕರೇ ಹಾವುಗಳು

Update: 2018-07-22 07:09 GMT

1972ರಲ್ಲಿ ತೆರೆಕಂಡ ಚಿತ್ರವೊಂದು ಇಂದಿಗೂ ಈ ಮಟ್ಟಕ್ಕೆ ಕ್ರೇಝ್ ಉಳಿಸಿಕೊಂಡಿರುವುದು ವಿಶೇಷ. ಆದರೆ ಮತ್ತೊಮ್ಮೆ ಚಿತ್ರ ನೋಡಿದಾಗ ಅಂಥದೊಂದು ಸೆಳೆತವನ್ನು ನಾಗರಹಾವು ಸೃಷ್ಟಿಸಿರುವುದರಲ್ಲಿ ಯಾವ ವಿಶೇಷವೂ ಇಲ್ಲ. ಯಾಕೆಂದರೆ ಚಿತ್ರ ಇಂದಿಗೂ ಅಷ್ಟು ವಿಶಿಷ್ಟವಾಗಿಯೇ ಕಾಣಿಸುತ್ತದೆ.

ಕಾದಂಬರಿ ಆಧಾರಿತ ಚಿತ್ರಗಳ ಶಕ್ತಿಯೇ ಹಾಗೆ. ಅದರಲ್ಲೂ ತರಾಸು ಅವರ ಮೂರು ಕಾದಂಬರಿಗಳನ್ನು ಸೇರಿಸಿ ಒಂದು ಚಿತ್ರರತ್ನವನ್ನೇ ಸೃಷ್ಟಿಸಿದ್ದಾರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇದೊಂದು ಸಿನೆಮಾ ಆನಂತರದ ಎಷ್ಟೊಂದು ಚಿತ್ರಗಳಿಗೆ ಸ್ಫೂರ್ತಿಯಾಗಿದೆ ಎನ್ನುವುದು ಚಿತ್ರ ನೋಡುತ್ತಿರುವಂತೆ ಗೊತ್ತಾಗಿ ಬಿಡುತ್ತದೆ. ಎರಡು ದಶಕದ ಹಿಂದೆ ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ‘ಸ್ಪಟಿಕಂ’ ಸಿನೆಮಾ ಕೂಡ ಇದೇ ಹಿನ್ನೆಲೆಯುಳ್ಳ ಚಿತ್ರವಾಗಿತ್ತು. ಈ ಸಿನೆಮಾವನ್ನು ತೀರ್ಥ ಹೆಸರಲ್ಲಿ ಮತ್ತೆ ಕನ್ನಡಕ್ಕೆ ರಿಮೇಕ್ ಮಾಡಲಾಗಿತ್ತು ಅನ್ನೋದು ಸದ್ಯದ ಕನ್ನಡ ಚಿತ್ರರಂಗದ ದುರಂತ. ಲೋಕನಾಥ್ ಅವರ ಕ್ಯಾರೆಕ್ಟರನ್ನೇ ಕದ್ದು ಹಿಂದಿಯ ‘ತ್ರಿ ಇಡಿಯಟ್ಸ್’ನಲ್ಲಿ ಮುಂದುವರಿಸಿದ್ದಾರೆ ಅನಿಸಿದರೆ ಅಚ್ಚರಿಯಿಲ್ಲ. ಕನ್ನಡದಲ್ಲಿ ನಾಗರಹಾವು ಹೆಸರಲ್ಲೇ ರಿಮೇಕ್ ಗಳು, ವಿಚಿತ್ರ ಸಿನೆಮಾಗಳು ಬಂದರೂ ಯಾವುದೂ ಇದರೆತ್ತರ ತಲುಪಲೇ ಇಲ್ಲ. ಅದಕ್ಕೆ ಕಾರಣ ಕತೆ ಮತ್ತು ನಿರೂಪಣೆಯ ರೀತಿ ಎನ್ನದೇ ವಿಧಿಯಿಲ್ಲ.

ಎಪ್ಪತ್ತರ ಕಾಲಘಟ್ಟದ ಚಿತ್ರವೊಂದನ್ನು ಈಗಿನ ಶ್ರೇಷ್ಠ ನಿರ್ದೇಶಕರು ಮಾಡಿದರೆ ಹೇಗಿರಬಹುದೋ ಅಷ್ಟೇ ಗುಣಮಟ್ಟದೊಂದಿಗೆ ಚಿತ್ರವನ್ನು ಮರಳಿ ತಂದ ಕೀರ್ತಿ ಬಾಲಾಜಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಸಿನೆಮಾ ಸ್ಕೋಪ್ ಮಾಡಿದಾಗ ದೃಶ್ಯಗಳು ವಿಕಾರಗೊಳ್ಳುವುದನ್ನು ನೋಡಿರುವ ನಮಗೆ ಇದು ಅಂಥ ಅನುಭವ ನೀಡುವುದಿಲ್ಲ. ದೃಶ್ಯಗಳ ಕ್ವಾಲಿಟಿಗೆ ತಕ್ಕಂತೆ ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿ ಸೇರಿಕೊಂಡಿದೆ. ಬಿಜಿಎಮ್ ಹೊಸದಾಗಿ ಧ್ವನಿಸುವ ಮೂಲಕ ನಮ್ಮನ್ನು ಚಿತ್ರದಿಂದ ಹೊರಗೆ ತರುವಂಥ ಅಪಾಯ ನಡೆದಿಲ್ಲ. ಎಲ್ಲವೂ ಚಿತ್ರದೊಂದಿಗೇ ಸಾಗುವ ಕಾರಣ ನಾವು ಕೂಡ ಚಿತ್ರದೊಳಗೇ ಮುಳುಗಿ ಬಿಡುತ್ತೇವೆ. ಇಂದಿನ ಸಿನೆಮಾ ಟೇಕಿಂಗ್ಸ್‌ಗಳಲ್ಲೇ ತಪ್ಪು ಹುಡುಕುವ ಯುವ ಮನಸ್ಸುಗಳಿಗೂ ಕೂಡ ತಂತ್ರಜ್ಞಾನ ಬೆಳೆದಿರದ ದಿನಗಳಲ್ಲಿ ಆ ದೃಶ್ಯಗಳನ್ನು ಹೇಗೆ ತೆಗೆದಿರಬಹುದು ಎಂಬ ಕುತೂಹಲವನ್ನಷ್ಟೇ ಚಿತ್ರ ನೀಡುತ್ತದೆ.

ನಾಗರಹಾವಿನ ಪತಾಕೆಯನ್ನು ಚಾಮಯ್ಯ ಮೇಷ್ಟ್ರು ಹಾರಿ ಬಿಟ್ಟಾಗ ಕ್ಯಾಮರಾ ಅದನ್ನು ಹಿಂಬಾಲಿಸುವ ರೀತಿ ಸೇರಿದಂತೆ ಛಾಯಾಗ್ರಾಹಕ ಚಿಟ್ಟಿಬಾಬು ಮತ್ತೊಮ್ಮೆ ಸ್ಮರಿಸಲ್ಪಡುತ್ತಾರೆ. ಭಕ್ತವತ್ಸಲಂ ಸಂಕಲನದ ರೀತಿಗೆ ತಲೆಬಾಗಲೇ ಬೇಕು. ಇನ್ನು ಕತೆಯೂ ಅಷ್ಟೇ. ಕಾಲಘಟ್ಟ ಬದಲಾದರೂ ಕೂಡ ಸಮಾಜ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡ ವಿದ್ಯಾರ್ಥಿಯನ್ನು ನೋಡುವ ರೀತಿ, ಧರ್ಮಗಳ ನಡುವೆ ನೆಮ್ಮದಿಯ ಭಾವೈಕ್ಯತೆ ಬಯಸುವ ಬದಲು ಜಾತಿ, ಧರ್ಮಗಳ ಪ್ರತ್ಯೇಕತೆಯ ಹೆಸರಲ್ಲೇ ಕೊಳೆತು ಹೋಗುವ ಮನಃಸ್ಥಿತಿಗಳಿಗೆ ಇಂದಿಗೂ ಕೊರತೆಯಿಲ್ಲ. ಹಾಗಾಗಿ ಇದು ಇಂದಿಗೂ ಅನ್ವಯಿಸುವಂಥ ಘಟನೆಗಳಿಂದ ಕೂಡಿದ ಚಿತ್ರ. ಒಟ್ಟಿನಲ್ಲಿ ಕ್ಲಾಸ್ ಚಿತ್ರವೊಂದನ್ನು ಅದೇ ಗುಣಮಟ್ಟದೊಂದಿಗೆ ಮತ್ತೆ ಚಿತ್ರಮಂದಿರಗಳಲ್ಲಿ ನೋಡುವ ಅವಕಾಶ ಕನ್ನಡಿಗರದ್ದಾಗಿದೆ.

ತಾರಾಗಣ: ವಿಷ್ಣುವರ್ಧನ್, ಆರತಿ
ನಿರ್ದೇಶನ: ಪುಟ್ಟಣ್ಣ ಕಣಗಾಲ್
ನಿರ್ಮಾಣ: ಎನ್. ವೀರಾಸ್ವಾಮಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News