ನೀರಾಳಿ-ಪ್ರಪಾತದ ಅಂಚಿನಲ್ಲಿ ಅಸಹಾಯಕ ಮನುಷ್ಯ

Update: 2018-07-21 18:37 GMT

ದೈನಂದಿನ ಬದುಕಿನಲ್ಲಿ ಎದುರಾಗುವ ಸಣ್ಣ ಪುಟ್ಟ ಸವಾಲುಗಳನ್ನೇ ವಸ್ತುವಾಗಿಟ್ಟುಕೊಂಡು ಸಿನೆಮಾ ಮಾಡುವಲ್ಲಿ ಮಲಯಾಳಿಗರು ಗಟ್ಟಿಗರು. ಇತ್ತೀಚಿನ ದಿನಗಳಲ್ಲಿ ಮಲಯಾಳಂ ಚಿತ್ರೋದ್ಯಮ ಥ್ರಿಲ್ಲರ್ ಚಿತ್ರಗಳ ಕಡೆಗೆ ಮುಖ ಮಾಡಿವೆ. ಮಮ್ಮುಟ್ಟಿ, ಮೋಹನ್‌ಲಾಲ್‌ರಂತಹ ಹಿರಿಯ ನಟರು, ಮಾಸ್ ವೀಕ್ಷಕರಿಗೆ ಹೊರತಾಗಿರುವ ಈ ಚಿತ್ರಗಳಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ. ಅಬ್ರಾಹಮಿಂಡೆ ಸಂತತಿಗಳ್, ಅಂಕಲ್ ಚಿತ್ರಗಳಲ್ಲಿ ಮಮ್ಮುಟ್ಟಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮೋಹನ್‌ಲಾಲ್ ಅವರಿಗೂ ಥ್ರಿಲ್ಲರ್ ಚಿತ್ರ ಹೊಸದೇನಲ್ಲ. ದೃಶ್ಯಂ ಅವರಪಾಲಿಗೆ ಮಲಯಾಳಂ ಚಿತ್ರೋದ್ಯಮದಲ್ಲಿ ತಿರುವು ಕೊಟ್ಟ ಚಿತ್ರ. ಇದಾದ ಬಳಿಕ ಅವರು ‘ಒಪ್ಪಂ’ ಚಿತ್ರದಲ್ಲಿ ನಿರ್ವಹಿಸಿದ ಕುರುಡನ ಪಾತ್ರವೂ ಸಾಕಷ್ಟು ಜನಪ್ರಿಯತೆಯನ್ನು ಕೊಟ್ಟಿತು. ಇದೀಗ ಬಂದಿರುವ ‘ನೀರಾಳಿ’ ಚಿತ್ರದಲ್ಲಿ ಮೋಹನ್‌ಲಾಲ್ ಇನ್ನೊಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಖ್ಯವಾಗಿ ಇಲ್ಲಿ ನಾಯಕನ ಅಸಹಾಯಕತೆಯೇ ಚಿತ್ರದ ಮುಖ್ಯ ವಸ್ತು. ಮನುಷ್ಯ ಹೇಗೆ ಕೆಲವೊಮ್ಮೆ ಪರಿಸ್ಥಿತಿಯ ಅಕ್ಟೋಪಸ್(ನೀರಾಳಿ ಎಂದರೆ ಅಕ್ಟೋಪಸ್)ಗೆ ಸಿಕ್ಕಿದರೆ ಅಸಹಾಯಕನಾಗಬೇಕಾಗುತ್ತದೆ ಎನ್ನುವುದನ್ನು ಹೇಳುವ ಚಿತ್ರ. ಒಂದು ಭೀಕರ ಅಪಘಾತವನ್ನು ವಸ್ತುವಾಗಿಟ್ಟು, ಅದರಲ್ಲಿ ಸಿಕ್ಕಿ ಹಾಕಿಕೊಂಡ ವ್ಯಕ್ತಿಯ ಒಳ ತಳಮಳವನ್ನು ಥ್ರಿಲ್ಲರ್ ಚಿತ್ರವಾಗಿ ಕಟ್ಟಿಕೊಡುವ ನಿರ್ದೇಶಕ ಅಜಯ್ ವರ್ಮಾ ಅವರ ಧೆರ್ಯವನ್ನು ಮೆಚ್ಚಬೇಕಾಗುತ್ತದೆ.
   ಕಥಾನಾಯಕ ಸನ್ನಿ(ಮೋಹನ್ ಲಾಲ್) ಮತ್ತು ಆತನ ಜೀಪಿನ ಚಾಲಕ ವೀರಪ್ಪನ್ (ಸೂರಜ್) ಬೆಂಗಳೂರಿನಿಂದ ಕೇರಳಕ್ಕೆ ಬರುವ ದಾರಿಯಲ್ಲಿ ಆಕಸ್ಮಿಕ ಅವಘಡಕ್ಕೀಡಾಗಿ ಬೃಹತ್ ಘಾಟಿಯಿಂದ ವಾಹನ ಸಮೇತ ಕೆಳಗುರುಳಿ, ಭಾರೀ ಕಣಿವೆಯ ತುದಿಯೊಂದರಲ್ಲಿ ಇನ್ನೇನು ಕೆಳಗೆ ಬೀಳಬೇಕು ಎನ್ನುವ ಸ್ಥಿತಿಯಲ್ಲಿ ನೇತಾಡುತ್ತಾ ತಮ್ಮ ಸಾವು-ಬದುಕಿನ ಕ್ಷಣಗಳನ್ನು ಎದುರಿಸುವುದು ಚಿತ್ರದ ಮುಖ್ಯ ಎಳೆ. ಚಿತ್ರ ಆರಂಭವಾಗುವುದೇ ಅಪಘಾತವೊಂದರ ಮೂಲಕ. ಜೀಪ್ ಕತ್ತಲಲ್ಲಿ ತೊಲ್ಪೆಟ್ಟಿ ಕಾಡಿನಲ್ಲಿ ಉರುಳುತ್ತಾ ಭಾರೀ ಪ್ರಪಾತದ ಕಡೆಗೆ ಸಾಗಿ ಇನ್ನೇನು ಕೆಳಗುರುಳಬೇಕು ಎನ್ನುವಷ್ಟರಲ್ಲಿ ಆ ವಾಹನದ ಹಿಂಬದಿಯ ಚಕ್ರವನ್ನು ಮರವೊಂದು ಹಿಡಿದಿಡುತ್ತದೆ. ವಾಹನದ ಮುಕ್ಕಾಲು ಭಾಗ ಪ್ರಪಾತದ ಕಡೆಗೆ ಮುಖ ಮಾಡಿ ನೇತಾಡುತ್ತದೆ. ಮುಂಬದಿಯಲ್ಲಿ ನಾಯಕ ಸನ್ನಿ ಮತ್ತು ಚಾಲಕ ವೀರಪ್ಪನ್. ಆತನ ದೇಹದ ಒಂದು ಭಾಗ ಕೈ ಮತ್ತು ಕಾಲು ಪ್ರಪಾತಕ್ಕೆ ಚಾಚಿಕೊಂಡಿವೆ. ಸೀಟ್ ಬೆಲ್ಟ್ ವೀರಪ್ಪನ್‌ನ್ನು ಕೆಳಗೆ ಬೀಳದಂತೆ ಹಿಡಿದಿಟ್ಟುಕೊಂಡಿದೆ. ನಾಯಕನ ಒಂದು ಕೈ ಸಂಪೂರ್ಣ ಹಾನಿಯಾಗಿದೆ. ಗಾಯಗಳ ನಡುವೆ ನಾಗರಿಕ ಸಮಾಜವನ್ನು ತಲುಪಲು ಅವರಿಗಿರುವ ಒಂದೇ ಒಂದು ದಾರಿ ಕೈಯಲ್ಲಿರುವ ಮೊಬೈಲ್. ಕಚೇರಿಯಿಂದ ಹೊರಬೀಳುವಾಗ ಮೊಬೈಲ್ ಕರೆನ್ಸಿ ಹಾಕಲು ತನ್ನ ಸಹೋದ್ಯೋಗಿಗೆ ಆತ ಹೇಳಿರುತ್ತಾನೆ. ದುರದೃಷ್ಟವಶಾತ್ ಸಹೋದ್ಯೋಗಿ ಮರೆತುಬಿಟ್ಟಿರುತ್ತಾನೆ. ಇನ್‌ಕಮಿಂಗ್ ಕಾಲ್ ಮಾತ್ರ ಸಾಧ್ಯ ಎನ್ನುವ ಸ್ಥಿತಿ. ಇದೇ ಸಂದರ್ಭದಲ್ಲಿ ಚಾಲಕ ವೀರಪ್ಪನ್ ಅರೆಪ್ರಜ್ಞಾವಸ್ಥೆಯಲ್ಲಿದ್ದಾನೆ. ಅವನ ಮೊಬೈಲ್ ಕಾಲ ಬುಡದಲ್ಲಿದೆ. ಸನ್ನಿ ಆ ಮೊಬೈಲ್‌ನ್ನು ತೆಗೆಯಲು ಬಾಗಿದರೆ ಇಡೀ ವಾಹನ ಆತನ ಜೊತೆಗೇ ಕೆಳ ಬಾಗುತ್ತದೆ. ಅಲ್ಲಾಡುವಂತಿಲ್ಲ. ದೂರದಲ್ಲಿ ಒಂದು ಕೋತಿ ಇವರ ಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸುತ್ತಿದೆ. ದೂರದ ಯಾವುದೋ ಚರ್ಚ್‌ನಿಂದ ಮತ ಪ್ರವಚನ ನಾಯಕನ ಕಿವಿಗೆ ಬೀಳುತ್ತಿದೆ. ಬದುಕುವುದಕ್ಕಾಗಿ ಸನ್ನಿಯ ೋರಾಟ ಅಲ್ಲಿಂದ ಶುರುವಾಗುತ್ತದೆ.
 ಸನ್ನಿಗೆ ಬದುಕಲೇ ಬೇಕಾದಂತಹ ಅನಿವಾರ್ಯವಿದೆ. ಯಾಕೆಂದರೆ ಆತ ಅನಿರೀಕ್ಷಿತವಾಗಿ ಈ ಪ್ರಯಾಣ ಹೊರಟಿರುವುದೇ, ಆಸ್ಪತ್ರೆಯಲ್ಲಿ ಹೆರಿಗೆಗೆ ಸಿದ್ಧಳಾಗಿ ನೋವುನ್ನುತ್ತಿರುವ ಪತ್ನಿಯನ್ನು ನೋಡುವುದಕ್ಕಾಗಿ. ಆಕೆಯ ಸ್ಥಿತಿ ಗಂಭೀರವಿದೆ ಎಂದು ಹೇಳಿದ್ದುದರಿಂದ ತಕ್ಷಣವೇ ಕಚೇರಿಯಿಂದ ಹೊರಡುವ ಅನಿವಾರ್ಯತೆ. ಆಗ ಎದುರಾಗುವ ಸಂಸ್ಥೆಯ ಜೀಪನ್ನೇರಿ ಪಯಣ. ಅಲ್ಲಿ ಹೆರಿಗೆಗಾಗಿ ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, ಇಲ್ಲಿ ಸನ್ನಿಯೂ ಅದೇ ನೋವನ್ನು ಅನುಭವಿಸುವಂತಹ ಸ್ಥಿತಿ. ರಕ್ಷಣೆಯ ದಾರಿಯನ್ನು ಹುಡುಕುವ ಸನ್ನಿಯ ಪ್ರಯತ್ನದ ಜೊತೆಗೇ ಫ್ಲಾಶ್‌ಬ್ಯಾಕ್‌ಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ವೀರಪ್ಪನ್ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು. ಅದರಿಂದಾಗಿ ಆತನಿಂದ ಬೇರ್ಪಟ್ಟಿರುವ ಮಗಳು. ಸಮಸ್ಯೆಯಿಂದ ಪಾರಾಗಲು ಆತ ಹಿಡಿದಿರುವ ಅಕ್ರಮ ದಾರಿ...ಇವೆಲ್ಲವನ್ನೂ ಪ್ರೇಕ್ಷಕರಿಗೆ ಸಣ್ಣದಾಗಿ ನಿರ್ದೇಶಕ ಬಿಚ್ಚಿಡುತ್ತಾ ಸಾಗುತ್ತಾನೆ. ಬೆಂಗಳೂರಿನಿಂದ ಹೊರಟ ಜೀಪ್‌ನ ಜೊತೆಗೇ ಇವೆಲ್ಲವೂ ತೆರೆದು ಸಿಕೊಳ್ಳತೊಡಗುತ್ತವೆ. ಮನುಷ್ಯ ಸಂಬಂಧಗಳ ಇತಿ ಮಿತಿಗಳು ಈ ಸಂದರ್ಭದಲ್ಲಿ ನಿಕಷಕೊಡ್ಡುತ್ತವೆ.
 ಚಿತ್ರದ ಕೆಲವು ಭಾಗ ತುಸು ದುರ್ಬಲವಾಗಿದೆ ಎನಿಸಿದರೂ, ಬೆಟ್ಟದ ತುದಿಯಲ್ಲಿ ನೇತಾಡುತ್ತಾ ಸಾವು-ಬದುಕಿನ ನಡುವೆ ತುಯ್ದಾಡುವ, ಬದುಕುವ ದಾರಿಗಾಗಿ ಉಪಾಯ ಹುಡುಕುವ ಸನ್ನಿ ಪಾತ್ರ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಚಿತ್ರ ಕೇವಲ ಅಪಘಾತವೊಂದನ್ನಷ್ಟೇ ಹಿಡಿದಿಡದೇ ಅದರ ಆಚೆಗೆ ಮನುಷ್ಯ ಸಂಬಂಧಗಳ ಹಿರಿಮೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದೆ. ಸನ್ನಿಯ ಪತ್ನಿಯಾಗಿ ಸಣ್ಣ ಪಾತ್ರದಲ್ಲೂ ಮನಮುಟ್ಟುವಂತೆ ಅಭಿನಯಿಸಿದ್ದಾರೆ ನಾದಿಯಾ. ಸನ್ನಿಯ ಪ್ರೇಯಸಿಯಾಗಿ ಪಾರ್ವತಿ ನಾಯರ್ ಪಾತ್ರವೂ ವಿಭಿನ್ನವಾಗಿದೆ. ಆರಂಭದಲ್ಲಿ ಋಣಾತ್ಮಕ ರೀತಿಯಲ್ಲಿ ಕಟ್ಟಿಕೊಡುವ ಈ ಪಾತ್ರವೇ ಕ್ಲೈಮಾಕ್ಸ್‌ನ್ನು ನಿರ್ಧರಿಸುವುದು ಚಿತ್ರಕತೆಯ ಹೆಚ್ಚುಗಾರಿಕೆ. ಎಂದು, ಯಾರ ಬದುಕಲ್ಲೂ ಸಂಭವಿಸಬಹುದಾದ ಒಂದು ಅಪಘಾತವನ್ನು ಇಟ್ಟು ಅಪರೂಪದ ಚಿತ್ರವಾಗಿಸಿದ್ದಾರೆ ನಿರ್ದೇಶಕ ಅಜಯ್. ಥ್ರಿಲ್ಲರ್ ಚಿತ್ರಕ್ಕೆ ಪೂರಕವಾಗಿ ಸಂಗೀತ ಮತ್ತು ಛಾಯಾಗ್ರಹಣ ಎರಡೂ ಕೆಲಸ ಮಾಡಿವೆ. ಗಾಢ ಕತ್ತಲಲ್ಲಿ ಸನ್ನಿಯ ಸಂಘರ್ಷವನ್ನು ಹಿಡಿದಿಡುವಲ್ಲಿ ಸಂತೋಷ್ ಛಾಯಾಗ್ರಹಣ ಸಂಪೂರ್ಣ ಯಶಸ್ವಿಯಾಗಿದೆ. ಫ್ಲಾಶ್‌ಬ್ಯಾಕ್ ಕತೆ ಇನ್ನಷ್ಟು ಬಿಗಿಯಾಗಬೇಕಾಗಿತ್ತು ಅನ್ನಿಸುತ್ತದೆ.

 

Writer - - ಮುಸಾಫಿರ್

contributor

Editor - - ಮುಸಾಫಿರ್

contributor

Similar News