ಸೈರಾತ್ ಗೆ ನ್ಯಾಯ ಒದಗಿಸುತ್ತದೆಯೇ ಧಡಕ್ ಸಂಗೀತ?

Update: 2018-07-22 04:32 GMT

ಇತರ ಭಾಷೆಗೆ ಡಬ್ ಮಾಡಿದ ಹಾಡುಗಳಿಗೆ ಹೊಂದುವಂತೆ ಸಾಹಿತ್ಯ ರಚಿಸುವುದು ಸುಲಭದ ಮಾತಲ್ಲ. ಎಷ್ಟು ಅನುಭವಿ ಗೀತರಚನೆಕಾರರಾದರೂ ಡಬ್ ಮಾಡಲ್ಪಟ್ಟ ಹಾಡುಗಳಿಗೆ ಸಾಹಿತ್ಯ ಬರೆಯುವಾಗ ಸಂಗೀತಕ್ಕೆ ಹೊಂದುವಂಥ ಸಾಲುಗಳನ್ನು ಬರೆಯಲು ವಿಫಲವಾಗುತ್ತಾರೆ. ಉದಾಹರಣೆಗೆ, ತಮಿಳು ಭಾಷೆಯಲ್ಲಿ ಎ.ಆರ್ ರೆಹಮಾನ್ ಸಂಗೀತ ನೀಡಿರುವ ಹಾಡುಗಳನ್ನು ಹಿಂದಿಗೆ ಅನುವಾದ ಮಾಡುವಾಗ ಅದರ ಸಾಹಿತ್ಯ ಏನೇನೊ ಆಗಿರುತ್ತದೆ. ಇದರಿಂದ ಉತ್ತಮ ಸಂಗೀತದ ಹೊರತಾಗಿಯೂ ಹಾಡು ಕೇಳಲು ಇಷ್ಟವಾಗುವುದಿಲ್ಲ. ಹಾಗಾಗಿಯೇ ಬಹಳಷ್ಟು ಬಾರಿ ಜನರು ತಾವು ಅರಿಯದ ಭಾಷೆಯಲ್ಲೇ ಹಾಡನ್ನು ಕೇಳಲು ಇಷ್ಟಪಡುತ್ತಾರೆ. ಇಂಥದ್ದೇ ಸ್ಥಿತಿ ಸೈರಾತ್ ಎಂಬ ಮರಾಠಿ ಸಿನೆಮಾದ ಹಿಂದಿ ಅವತರಣಿಕೆ ‘ಧಡಕ್’ ಸಂಗೀತಕ್ಕೂ ಒದಗಿದೆ ಎಂದರೆ ತಪ್ಪಲ್ಲ. ಸೈರಾತ್ ಚಿತ್ರದ ಯಾದ್ ಲಗ್ಲಾ ಹಾಡು ಹಿಂದಿಯ ಧಡಕ್‌ನಲ್ಲಿ ಪೆಹೆಲಿ ಬಾರ್ ಆಗಿದೆ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ಅಮಿತ್ ಭಟ್ಟಾಚಾರ್ಯ. ಈ ಹಾಡಿಗೆ ಭಟ್ಟಾಚಾರ್ಯ ಉತ್ತಮ ಸಾಲುಗಳನ್ನೇ ಬರೆದಿದ್ದರೂ ಅದನ್ನು ಕೇಳಲು ಅಷ್ಟೊಂದು ಇಷ್ಟವಾಗುವುದಿಲ್ಲ. ಈ ಹಾಡಿನಲ್ಲಿ ಸಂಗೀತ ನಿರ್ದೇಶಕರಾದ ಅಜಯ್ ಅತುಲ್ ಮರಾಠಿಯ ಹಾಡನ್ನು ಯಥಾವತ್ತಾಗಿ ಬಳಸಿಕೊಂಡಿದ್ದಾರೆ.

ಆದರೆ ಸೈರಾತ್‌ನ ಅತ್ಯಂತ ಹಿಟ್ ಹಾಡು ಝಿಂಗಾಟ್‌ನ ಹಿಂದಿ ಸಾಹಿತ್ಯ ಕೇಳುಗನಿಗೆ ಅಷ್ಟೊಂದು ಕಿರಿಕಿರಿ ಉಂಟು ಮಾಡುವುದಿಲ್ಲ. ಇಲ್ಲೂ ಕೂಡಾ ಅಮಿತ್ ಭಟ್ಟಾಚಾರ್ಯರ ಸಾಹಿತ್ಯವನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಮರಾಠಿ ಹಾಡಿನಿಂದಲೇ ಭಟ್ಟಿ ಇಳಿಸಲಾಗಿದೆ. ಅಜಯ್ ಅತುಲ್ ಜೋಡಿಯಲ್ಲಿ ಅಜಯ್ ಗೋಗಾವಲೆ ಹಾಡೂ ಹಾಡುತ್ತಾರೆ. ಅವರು ಮರಾಠಿಯಲ್ಲಿ ಹಾಡಿರುವ ಹಲವು ಹಾಡುಗಳು ಸೂಪರ್ ಹಿಟ್ ಆಗಿವೆ. ಕನ್ನಡದ ರ್ಯಾಂಬೊ ಸಿನೆಮಾದ ಕಣ್ಣಾ ಮುಚ್ಚೆ ಕಾಡೆ ಕೂಡೆ ಆಟ ನಮ್ಮ ಬಾಳು.... ಹಾಡಿನ ಸೃಷ್ಟಿಕರ್ತ ಕೂಡಾ ಅಜಯ್ ಗೋಗಾವಲೆ. ಆದರೆ ಧಡಕ್ ಚಿತ್ರದ ಪ್ರತಿಯೊಂದು ಹಾಡಿನಲ್ಲೂ ಅವರು ತಮ್ಮ ಧ್ವನಿಯಿರಬೇಕೆಂದು ಬಯಸಿರುವುದು ಕೇಳುಗನಿಗೆ ಸ್ವಲ್ಪ ಕಿರಿಕಿರಿ ಉಂಟು ಮಾಡುತ್ತದೆ. ಮುಖ್ಯವಾಗಿ ‘ವಾರ ರೆ.....’ ಹಾಡು ಉತ್ತಮವಾಗಿದ್ದರೂ ಅಜಯ್ ಧ್ವನಿಯಿಂದಾಗಿ ಕೇಳುಗನಿಗೆ ಅಪಥ್ಯವಾಗಬಹುದು. ಅಜಯ್ ಉತ್ತಮವಾಗಿ ಹಾಡಿದ್ದರೂ ಇತರ ಗಾಯಕರು ಹಾಡಿದ್ದರೆ ಈ ಹಾಡು ಮತ್ತಷ್ಟು ಉತ್ತಮವಾಗಿ ಮೂಡಿಬರುತ್ತಿತ್ತು. ಏನೇ ಆದರೂ ಅಜಯ್ ಅತುಲ್ ಮರಾಠಿಯ ಸೈರಾತ್‌ಗೆ ನೀಡಿರುವ ಸಂಗೀತಕ್ಕೆ ಹೋಲಿಸಿದರೆ ಹಿಂದಿಯ ಧಡಕ್ ಚಿತ್ರದ ಹಾಡುಗಳು ಸೋಲುತ್ತವೆ ಎಂದೇ ಹೇಳಬಹುದು. ಆದರೂ ಧಡಕ್ ಹಾಡುಗಳು ಸಂಗೀತ ಪ್ರೇಮಿಗಳಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News