ಸಲಿಂಗ ಕಾಮ: ಕಾನೂನು ಸಚಿವರು ಹೇಳಿದ್ದೇನು?

Update: 2018-07-22 05:01 GMT

ಹೊಸದಿಲ್ಲಿ, ಜು.22: ''ಲೈಂಗಿಕ ಪಾಲುದಾರರ ಆಯ್ಕೆ ಆಯಾ ವ್ಯಕ್ತಿಯ ವೈಯಕ್ತಿಕ ವಿಷಯ'' ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ದೇಶದಲ್ಲಿ ಸಲಿಂಗಕಾಮವನ್ನು ಕಾನೂನುಬಾಹಿರ ಎಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ರದ್ದು ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ವಿರೋಧಿಸುವುದಿಲ್ಲ ಎಂಬ ನಿಲುವು ಪ್ರಕಟಿಸಿದ ಬಳಿಕ ಸರ್ಕಾರದಿಂದ ಮೊದಲ ಘೋಷಣೆ ಇದಾಗಿದೆ.

ಬದಲಾಗುತ್ತಿರುವ ಸಾಮಾಜಿಕ ಪ್ರವೃತ್ತಿಯನ್ನು ಗೌರವಿಸುವ ದೃಷ್ಟಿಯಿಂದ ಈ ನಿಲುವು ಕೈಗೊಳ್ಳಲಾಗಿದೆ ಎಂದು "ಟೈಮ್ಸ್ ಆಫ್ ಇಂಡಿಯಾ"ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ತ್ರಿವಳಿ ತಲಾಕ್ ಬಗೆಗಿನ ಮಸೂದೆ ಬಗ್ಗೆ ಕೇಳಿದ ಪ್ರಶ್ನೆಗೆ, ಲಿಂಗತ್ವ ಹಕ್ಕನ್ನು ಗೌರವಿಸುವ ಕ್ರಮ ಇದಾಗಿದೆ. ತ್ರಿವಳಿ ತಲಾಕ್ ಅಪರಾಧ ಕೃತ್ಯ ಎಂದು ಪರಿಗಣಿಸುವ ಮೂಲಕ ಸಾವಿರಾರು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಬದ್ಧತೆ ನಮ್ಮದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹತ್ಯೆಗಳನ್ನು ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನೀಡಿದ ಸಲಹೆಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆಯೇ ಎಂದು ಕೇಳಿದಾಗ, "ಹತ್ಯೆ ಘಟನೆಗಳನ್ನು ನಾವು ಖಂಡಿಸುತ್ತೇವೆ. ಸುಪ್ರೀಂಕೋರ್ಟ್ ಈ ಸಂಬಂಧ ನೀಡಿದ ತೀರ್ಪನ್ನು ಪರಿಶೀಲಿಸುತ್ತೇವೆ. ಹತ್ಯೆಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ. ಇದನ್ನು ನಾವು ಬಳಸಿಕೊಳ್ಳಬೇಕು. ಸುಪ್ರೀಂ ಶಿಫಾರಸ್ಸುಗಳನ್ನು ನಾವು ವಿವರವಾಗಿ ಪರಿಶೀಲಿಸುತ್ತೇವೆ" ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News