ಹಾಲು ಮಾರಾಟಗಾರನ ಮಗನ ಬಾಳಲ್ಲಿ ಮೂಡಿತು ಬೆಳ್ಳಿ ರೇಖೆ

Update: 2018-07-22 05:19 GMT

ಹೊಸದಿಲ್ಲಿ, ಜು.22: ಇದು ಹಾಲು ಮಾರಾಟಗಾರನ ಮಗ ಮ್ಯಾಟ್‌ನಲ್ಲಿ ಮಿಂಚಿದ ಯಶೋಗಾಥೆ. ಉತ್ತರಪ್ರದೇಶದ ತೆಂಡ್ವಿ ಗ್ರಾಮದಲ್ಲಿ ತಂದೆಯೊಂದಿಗೆ ಹಾಲು ಮಾರಾಟ ಮಾಡುತ್ತಾ ಬಾಲ್ಯವನ್ನು ಕಳೆದ ಸಚಿನ್ ಗಿರಿಗೆ ಒಂದು ದಿನ ಕುಸ್ತಿಪಟು ಆಗಬೇಕೆಂಬ ಆಸೆ ಮೂಡಿತು. ತಕ್ಷಣವೇ ಅವರು ತಂದೆ ಹನ್ಸ್‌ರಾಜ್ ಗಿರಿ ಬಳಿ ತನ್ನ ಆಸೆ ತೋಡಿಕೊಂಡರು. ಸ್ವತಃ ಕುಸ್ತಿಪಟು ಆಗಿರುವ ಹನ್ಸ್‌ರಾಜ್ ಮಗನ ಆಸೆಗೆ ಓಗೊಟ್ಟು ಹಳ್ಳಿಯ ಕುಸ್ತಿ ಅಖಾಡಕ್ಕೆ ಸೇರ್ಪಡೆಯಾಗುವಂತೆ ಹೇಳಿದರು. 11 ವರ್ಷಗಳಿಂದ ಕುಸ್ತಿ ಅಖಾಡದಲ್ಲಿ ಬೆವರಿಳಿಸುತ್ತಿರುವ ಸಚಿನ್ ಮನೆಯವರಿಂದ ಈತನಕ ನೆರವು ಪಡೆದಿಲ್ಲ.

 ಅಖಾಡದಲ್ಲಿ ಕಠಿಣ ಶ್ರಮಪಟ್ಟಿರುವ ಸಚಿನ್ ಸ್ಥಳೀಯ ಮಣ್ಣಿನ ಕುಸ್ತಿ ಅಂಗಣದಲ್ಲಿ ಸ್ಪರ್ಧಿಸತೊಡಗಿದರು. ಮುಂದಿನ 5 ವರ್ಷಗಳಲ್ಲಿ ಸಚಿನ್ ವಾರಾಣಸಿಯ ಅಕ್ಕ-ಪಕ್ಕದಲ್ಲಿ ನಡೆಯುವ ಹೆಚ್ಚಿನೆಲ್ಲಾ ಕುಸ್ತಿ ಸ್ಪರ್ಧೆಗಳಲ್ಲಿ ಪದಕ ಗೆಲ್ಲಲಾರಂಭಿಸಿದರು. ಸಚಿನ್ ತನಗೆ ಲಭಿಸಿರುವ ಪ್ರಶಸ್ತಿ ಮೊತ್ತವನ್ನು ತಂದೆಗೆ ನೀಡುತ್ತಿದ್ದರು. ತನ್ನ ಮಗ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಆಸೆ ಹೊಂದಿರುವ ಹನ್ಸ್‌ರಾಜ್ ಮಗನಿಗೆ ಪ್ರತಿದಿನ ಒಣಹಣ್ಣುಗಳನ್ನು ತಂದುಕೊಡುತ್ತಿದ್ದರು.

 ಹನ್ಸ್‌ರಾಜ್‌ರ ಆಸೆ ಕೊನೆಗೂ ಈಡೇರಿದೆ. ಶನಿವಾರ ದಿಲ್ಲಿಯಲ್ಲಿ ನಡೆದ ಜೂನಿಯರ್ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಸಚಿನ್ ಮೊದಲ ಬಾರಿ ಅಂತರ್‌ರಾಷ್ಟ್ರೀಯ ಪದಕವನ್ನು ಗೆದ್ದುಕೊಂಡರು. 19ರ ಹರೆಯದ ಸಚಿನ್ ಭಾರತದ ಪದಕದ ಖಾತೆಗೆ 2ನೇ ಬೆಳ್ಳಿ ಪದಕ ಸೇರ್ಪಡೆಗೊಳಿಸಿದರು. ಸಚಿನ್ ಸಹ ಆಟಗಾರ ನವೀನ್ ಸಿಹಾಗ್ ಹಾಗೂ ವಿಶಾಲ್ ಕಲಿರಾಮನ್ 2ನೇ ಸ್ಥಾನ ಪಡೆದರು. ಕರಣ್ ಮೋರ್ ಕಂಚು ಜಯಿಸಿದರು.

‘‘ಬೆಳ್ಳಿ ಪದಕ ಜಯಿಸಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಚಿನ್ನ ಲಭಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ನಾನು ಈ ಪಂದ್ಯಕ್ಕಾಗಿಯೇ ತಯಾರಿ ನಡೆಸಿದ್ದೆ. ಇರಾನ್ ಕುಸ್ತಿಪಟು ತನ್ನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ನಾನು ಫೈನಲ್‌ನಲ್ಲಿ ಇನ್ನೂ ಚೆನ್ನಾಗಿ ಆಡಬೇಕಾಗಿತ್ತು’’ ಎಂದು ಸಚಿನ್ ಫೈನಲ್ ಪಂದ್ಯದ ಬಳಿಕ ಹೇಳಿದ್ದಾರೆ.

 ‘‘ಸಚಿನ್ ಬಡ ಕುಟುಂಬದಿಂದ ಬಂದಿದ್ದು ಆತನಿಗೆ ಐವರು ಸಹೋದರಿಯರಿದ್ದಾರೆ. ಇದೀಗ ಲಭಿಸಿರುವ ಪದಕ ಅವರಿಗೆ ಉದ್ಯೋಗ ಅವಕಾಶ ಸೃಷ್ಟಿಸುವ ವಿಶ್ವಾಸವಿದೆ. ಸಚಿನ್‌ಗೆ ಕುಸ್ತಿ ಮೂಲಕ ಗಳಿಸುವ ಆದಾಯದಿಂದ ಕುಟುಂಬಕ್ಕೆ ಹೆಚ್ಚು ನೆರವು ನೀಡಲಾಗುತ್ತಿಲ್ಲ. ಆತನಿಗೆ ಉದ್ಯೋಗದ ಅಗತ್ಯವಿದೆ’’ ಎಂದು ಸಚಿನ್‌ರ ಕೋಚ್ ರವೀಂದ್ರ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News