ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯ್ದೆ ಸೂಚನೆ ಪ್ರಕಟಣೆಗೆ ರಾಜ್ಯಗಳ ನಿರಾಸಕ್ತಿ

Update: 2018-07-22 14:38 GMT

ಹೊಸದಿಲ್ಲಿ, ಜು.22: ಅಂಗವಿಕಲ ವ್ಯಕ್ತಿಗಳ ಹಕ್ಕು (ಆರ್‌ಪಿಡಬ್ಲೂಡಿ) ಕಾಯ್ದೆಯ ನಿಯಮಗಳ ಬಗ್ಗೆ ಪ್ರಕಟಣೆ ಜಾರಿಗೊಳಿಸುವ ಸೂಚನೆಯನ್ನು ಕೇವಲ 10 ರಾಜ್ಯಗಳು ಮಾತ್ರ ಪಾಲಿಸಿದ್ದು, ಬಹುತೇಕ ರಾಜ್ಯಗಳು ನಿರಾಸಕ್ತಿ ತೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016ರ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದ್ದ ಕಾಯ್ದೆಯನ್ನು ಜಾರಿಗೊಳಿಸುವಂತೆ 2017ರ ಎಪ್ರಿಲ್‌ನಲ್ಲಿ ಸೂಚನೆ ಹೊರಡಿಸಲಾಗಿತ್ತು. ಬಳಿಕ ಕಾಯ್ದೆಯನ್ನು ಅನುಷ್ಠಾನಗೊಳಿಸುವ ನಿಯಮಗಳನ್ನು ಕಳೆದ ವರ್ಷದ ಜೂನ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಪ್ರಕಟಿಸಿತ್ತು. ಆರ್‌ಪಿಡಬ್ಲ್ಯುಡಿ ಕಾಯ್ದೆಯ ಕುರಿತು ಪ್ರಪ್ರಥಮ ರಾಷ್ಟ್ರೀಯ ಅಂಗವೈಕಲ್ಯ ವಿಚಾರ ವಿಮರ್ಶೆ ಸಭೆ ಗುರುವಾರ ನಡೆದಿದ್ದು, ಬಹುತೇಕ ರಾಜ್ಯಗಳು ಸೂಚನೆಯನ್ನು ಪಾಲಿಸದಿರುವುದನ್ನು ಪ್ರಸ್ತಾವಿಸಲಾಯಿತು. ನ್ಯಾಷನಲ್ ಸೆಂಟರ್ ಫಾರ್ ಪ್ರೊಮೋಷನ್ ಆಫ್ ಎಂಪ್ಲಾಯ್‌ಮೆಂಟ್ ಫಾರ್ ಡಿಸೇಬಲ್ಡ್ ಪೀಪಲ್(ಎನ್‌ಸಿಪಿಇಡಿಪಿ) ಸಭೆಯನ್ನು ಸಂಯೋಜಿಸಿದ್ದು ಬ್ರಿಟನ್‌ನ ಡಿಎಫ್‌ಐಡಿ, ಅಂಗವಿಕಲ ವ್ಯಕ್ತಿಗಳ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಇಲಾಖೆ, ಎಂಫಾಸಿಸ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಲಿಯೋನಾರ್ಡ್ ಚೆಶೈರ್ ಸಹಕಾರದಲ್ಲಿ ಸಭೆ ನಡೆಯಿತು.

ತೆಲಂಗಾಣ, ಒರಿಸ್ಸಾ, ಛತ್ತೀಸ್‌ಗಢ, ಬಿಹಾರ, ಗುಜರಾತ್, ಉ.ಪ್ರದೇಶ, ಮೇಘಾಲಯ ಸೇರಿದಂತೆ ದೇಶದ ಕೇವಲ ಮೂರನೇ ಒಂದರಷ್ಟು ರಾಜ್ಯಗಳು(29 ರಾಜ್ಯಗಳಲ್ಲಿ 10 ಮಾತ್ರ) ಆರ್‌ಪಿಡಬ್ಲ್ಯುಡಿ ಕಾಯ್ದೆಯ ನಿಯಮಗಳ ಬಗ್ಗೆ ಪ್ರಕಟಣೆ ನೀಡಿವೆ. ಕಾಯ್ದೆ ಜಾರಿಗೊಂಡ ಆರು ತಿಂಗಳೊಳಗೆ ಪ್ರಕಟಣೆ ನೀಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿತ್ತು ಎಂದು ಎನ್‌ಸಿಪಿಇಡಿಪಿ ಸದಸ್ಯರು ತಿಳಿಸಿದ್ದಾರೆ.

ಭಾರತವು ಅಂಗವಿಕಲ ವ್ಯಕ್ತಿಗಳಿಗೆ ಉದ್ಯೋಗ ಮೀಸಲಾತಿ ನೀಡುತ್ತಿರುವ ಏಕೈಕ ದೇಶವಾಗಿರುವ ಕಾರಣ ಎಲ್ಲಾ ರಾಜ್ಯಗಳು ನಿಯಮಗಳ ಕುರಿತ ಪ್ರಕಟಣೆ ನೀಡಬೇಕು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಡಿಇಪಿಡಬ್ಲ್ಯುಡಿ ಕಾರ್ಯದರ್ಶಿ ಶಕುಂತಳಾ ಗ್ಯಾಮ್ಲಿನ್ ಹೇಳಿದ್ದಾರೆ. ಶೇ.3ರಿಂದ 4ರಷ್ಟು ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಸರಕಾರಿ ಉದ್ಯೋಗದಲ್ಲಿ ನೀಡಲಾಗುತ್ತಿರುವ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು, ಹಾಗೂ ಶೇ.3ರಿಂದ 5ರಷ್ಟು ಪ್ರಮಾಣದ ಅಂಗವೈಕಲ್ಯ ಹೊಂದಿರುವವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಕಾಯ್ದೆಯಡಿ ಅವಕಾಶವಿದೆ. ಅಲ್ಲದೆ ಮಾನದಂಡದ ಅಂಗವೈಕಲ್ಯ ಹೊಂದಿರುವ 6ರಿಂದ 18 ವರ್ಷದೊಳಗಿನ ಪ್ರತೀ ಮಕ್ಕಳಿಗೂ ಉಚಿತ ಶಿಕ್ಷಣ ಪಡೆಯುವ ಹಕ್ಕು ನೀಡಲಾಗಿದೆ ಮತ್ತು ಅಂಗವೈಕಲ್ಯದ ವಿಧಗಳನ್ನು 7ರಿಂದ 21ಕ್ಕೆ ಹೆಚ್ಚಿಸಲಾಗಿದೆ.

ಕಾಯ್ದೆಯಲ್ಲಿ ತಿಳಿಸಲಾಗಿರುವ ಯಾವುದೇ ವಿಷಯಗಳನ್ನು ಉಲ್ಲಂಘಿಸುವವರಿಗೆ ಗರಿಷ್ಟ 5 ಲಕ್ಷ ರೂ. ದಂಡ ವಿಧಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News