ಲೈಂಗಿಕ ದೌರ್ಜನ್ಯ ಪ್ರಕರಣದ ತ್ವರಿತ ತನಿಖೆಗೆ ಕೇಂದ್ರದಿಂದ 5,000 ‘ಅತ್ಯಾಚಾರ ತನಿಖಾ ಕಿಟ್’ ಖರೀದಿ

Update: 2018-07-22 14:47 GMT

ಹೊಸದಿಲ್ಲಿ, ಜು. 22: ಲೈಂಗಿಕ ಕಿರುಕುಳ ಪ್ರಕರಣದ ತ್ವರಿತ ತನಿಖೆಗೆ ದೇಶಾದ್ಯಂತ ಇರುವ ಪೊಲೀಸ್ ಠಾಣೆಗಳಿಗೆ ಒದಗಿಸಲು ಗೃಹ ಸಚಿವಾಲಯ 5,000 ಅತ್ಯಾಚಾರ ತನಿಖಾ ಕಿಟ್‌ಗಳನ್ನು ಖರೀದಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ. ಪ್ರಸ್ತುತ ದೇಶಾದ್ಯಂತದ ಕೆಲವು ಠಾಣೆಗಳನ್ನು ಆಯ್ಕೆ ಮಾಡಿ ತಲಾ 5 ಕಿಟ್‌ಗಳನ್ನು ಪೂರೈಸಲಾಗುವುದು. ತಮಗೆ ನೀಡುವ ಕೊಡುಗೆಯೊಂದಿಗೆ ಚಿಪ್ ಅನ್ನು ಕೂಡ ನೀಡಬೇಕು ಎಂದು ರಾಜ್ಯಗಳು ವಿನಂತಿಸಿವೆ.

ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರದ ಪ್ರಕರಣಗಳಲ್ಲಿ ಸಾಕ್ಷ ಸಂಗ್ರಹಿಸಲು ಹಾಗೂ ಕೂಡಲೇ ವೈದ್ಯಕೀಯ ತನಿಖೆ ನಡೆಸಲು ಸಾಧ್ಯವಾಗುವಂತೆ ಈ ಕಿಟ್ ಅನ್ನು ವಿನ್ಯಾಸಗೊಳಿಸಲಾಗಿದೆ. ಲೈಂಗಿಕ ಕಿರುಕುಳದ ಪ್ರಕರಣಗಳ ತ್ವರಿತ ವಿಚಾರಣೆ ನಡೆಸಲು ದೇಶಾದ್ಯಂತ ಆಯ್ದ ಪೊಲೀಸ್ ಠಾಣೆಗಳಿಗೆ ಪೂರೈಸಲು 5000 ಕಿಟ್‌ಗಳನ್ನು ಗೃಹ ಸಚಿವಾಲಯ ಖರೀದಿಸಿದೆ ಎಂದು ಅವರು ತಿಳಿಸಿದ್ದಾರೆ. ಪ್ರತಿ ಕಿಟ್ ಟೆಸ್ಟ್ ಟ್ಯೂಬ್ ಹಾಗೂ ಬಾಟಲಿಯನ್ನು ಹೊಂದಿರಲಿದೆ. ಇದರ ವೆಚ್ಚ ರೂ. 200ರಿಂದ 300 ಆಗಬಹುದು ಎಂದು ಅವರು ತಿಳಿಸಿದ್ದಾರೆ. ಇಂತಹ ಕಿಟ್‌ಗಳನ್ನು ಖರೀದಿಸುವಂತೆ ಹಾಗೂ ಪೊಲೀಸ್ ಠಾಣೆಗಳಲ್ಲಿ ಇರಿಸಿಕೊಳ್ಳುವಂತೆ ಕಳೆದ ವಾರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಹೇಳಿದ್ದರು. ರಾಜ್ಯಗಳು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿವೆ. ಹರ್ಯಾಣ ಸರಕಾರ ಈ ಕಿಟ್ ಅನ್ನು ಹೊಂದಲು ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

 ಈ ಕಿಟ್ ಅನ್ನು ಅತ್ಯಾಚಾರ ಅಥವಾ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯಲ್ಲಿ ಪತ್ತೆಯಾಗುವ ವಿವಿಧ ದೇಹ ದ್ರವದ ಮಾದರಿಗಳಾದ ರಕ್ತ, ವೀರ್ಯ, ಬೆವರನ್ನು ಸಂಗ್ರಹಿಸಲು ಬಳಸಲಾಗುತ್ತದೆ. ಅನಂತರ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತದೆ. ಈ ಕೀಟ್‌ನಲ್ಲಿ ದೇಹದ್ರವದ ಮಾದರಿಗೆ ಮುದ್ರೆ ಹಾಕಿದ ಸಮಯ ಹಾಗೂ ತನಿಖೆಯಲ್ಲಿ ಭಾಗಿಯಾದ ವ್ಯೆದ್ಯರು ಹಾಗೂ ಪೊಲೀಸ್ ಅಧಿಕಾರಿಯ ಹೆಸರನ್ನು ನಮೂದಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News