ಉದ್ದವಾಗುತ್ತಿದೆ ಪ್ರಧಾನಿಯ ವಿದೇಶಿ ಪ್ರಯಾಣದ ಪಟ್ಟಿ

Update: 2018-07-22 14:50 GMT

ಹೊಸದಿಲ್ಲಿ, ಜು. 22: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ 84 ದೇಶಗಳ ಪಟ್ಟಿಗೆ ಇನ್ನೆರೆಡು ದೇಶಗಳು ಸೇರಲಿವೆ. ನರೇಂದ್ರ ಮೋದಿ ಅವರು ಮುಂದಿನ ವಾರ ಆಫ್ರಿಕಾ ಪ್ರವಾಸಕ್ಕೆ ತೆರಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೊದಲಿಗೆ ರ್ವಾಂಡ, ಉಗಾಂಡಕ್ಕೆ ತೆರಳಲಿದ್ದಾರೆ. ಅನಂತರ ವಾರ್ಷಿಕ ಬ್ರಿಕ್ಸ್ ಶೃಂಗದಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದಾರೆ.

 ರಾಜ್ಯ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಕ್ಕೆ 1,484 ಕೋಟಿ ರೂ. ವೆಚ್ಚವಾಗಿರುವುದು ಬಹಿರಂಗವಾಗಿದೆ. ಇದಕ್ಕೆ ವಿರುದ್ಧವಾಗಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ವಿದೇಶ ಭೇಟಿಗೆ ಮೋದಿ ಅವರ ವೆಚ್ಚಕ್ಕಿಂತ ಅರ್ಧದಷ್ಟು ಅಂದರೆ 642 ಕೋ. ರೂ. ವೆಚ್ಚ ಮಾಡಿದ್ದಾರೆ. ಮೋದಿ ಅವರ ಈ ವೆಚ್ಚಗಳಲ್ಲಿ ಚಾರ್ಟರ್ಡ್ ವಿಮಾನ, ವಿಮಾನ ನಿರ್ವಹಣೆ, ಹಾಟ್‌ಲೈನ್ ಸೌಲಭ್ಯ ಸೇರಿದೆ. ಆದರೆ, ವಾಸ್ತವ್ಯ ಹಾಗೂ ಇತರ ವೆಚ್ಚ ಸೇರಿಲ್ಲ.

 ಅವರ ಅತಿ ಹೆಚ್ಚು ವೆಚ್ಚದ ವಿದೇಶ ಪ್ರವಾಸ ನಡೆಸಿದ್ದು 2015ರ ಏಪ್ರಿಲ್‌ನಲ್ಲಿ. ಅದು ಫ್ರಾನ್ಸ್, ಜರ್ಮನಿ ಹಾಗೂ ಕೆನಡಾಕ್ಕೆ. ಈ ಪ್ರವಾಸದ ಸಂದರ್ಭದ ಚಾರ್ಟರ್ಡ್ ವಿಮಾನ, ಹಾಟ್‌ಲೈನ್ ಸೌಲಭ್ಯಕ್ಕೆ ಮಾತ್ರ ಸುಮಾರು 32 ಕೋ. ರೂ. ವೆಚ್ಚವಾಗಿದೆ. ಪಟ್ಟಿ ಗಮನಿಸಿದಾಗ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 171 ದಿನಗಳು ಮೋದಿ ಅವರು ಪ್ರವಾಸದಲ್ಲಿ ಇದ್ದುದನ್ನು ಸೂಚಿಸುತ್ತದೆ. ಮೋದಿ ಅವರು ಚೀನ ಹಾಗೂ ಅಮೆರಿಕಕ್ಕೆ ಐದು ಬಾರಿ ಭೇಟಿ ನೀಡಿದ್ದರು. 2016-17ರಲ್ಲಿ ಅವರು ಅಮೆರಿಕಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಈ ವರ್ಷ ಚೀನಕ್ಕೆ ಎರಡು ಬಾರಿ ಭೇಟಿ ನೀಡಿದ್ದರು. ಬ್ರಿಕ್ಸ್ ಹಾಗೂ ಪೂರ್ವ ಏಶ್ಯಾ ಶೃಂಗ ನಡೆಯುವ ಜುಲೈ ಹಾಗೂ ನವೆಂಬರ್‌ನಲ್ಲಿ ಮೋದಿ ಅವರು ಹೆಚ್ಚು ಪ್ರವಾಸ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News