ಬಾಲಕಿಯ ಮೇಲೆ ಎಂಟು ಯುವಕರಿಂದ ಅತ್ಯಾಚಾರ: ಆರೋಪ

Update: 2018-07-22 14:56 GMT

ಪುದುಚೇರಿ,ಜು.22: ನೆರೆಯ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಎಂಟು ಯುವಕರು ಇಲ್ಲಿಯ 16 ಹರೆಯದ ಬಾಲಕಿಯ ಮೇಲೆ ಅತ್ಯಾಚಾರವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

 ಶಾಲೆಯನ್ನು ಅರ್ಧದಲ್ಲಿಯೇ ತೊರೆದಿರುವ ಬಾಲಕಿಯು ವಿಲ್ಲುಪುರಂ ಜಿಲ್ಲೆಯ ವಳುದವೂರ್‌ನಲ್ಲಿರುವ ಅಜ್ಜ-ಅಜ್ಜಿಯನ್ನು ಭೇಟಿಯಾಗಲು ಆಗಾಗ್ಗೆ ಅಲ್ಲಿಗೆ ತೆರಳುತ್ತಿದ್ದಳು. ಈ ಸಂದರ್ಭ ಆಕೆ ಆರೋಪಿಗಳ ಪೈಕಿ ಓರ್ವನೊಂದಿಗೆ ಸಲುಗೆಯನ್ನು ಬೆಳೆಸಿಕೊಂಡಿದ್ದಳು ಎಂದು ಪೊಲೀಸರು ರವಿವಾರ ಇಲ್ಲಿ ತಿಳಿಸಿದರು. ಇತ್ತೀಚಿಗೆ ಬಾಲಕಿ ವಳುದವೂರ್‌ಗೆ ತೆರಳಿದ್ದಾಗ ಸ್ನೇಹಿತ ಆರೋಪಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವನ್ನು ನಡೆಸಿದ್ದ. ತನ್ನ ಕೃತ್ಯವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿದ್ದ ಆತ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆಯನ್ನೂ ಒಡ್ಡಿದ್ದ.

ಬಾಲಕಿಯ ಬಗ್ಗೆ ತನ್ನ ಏಳು ಸ್ನೇಹಿತರಿಗೆ ತಿಳಿಸಿದ್ದ ಆತ ಆಕೆಯನ್ನು ಜಿಲ್ಲೆಯಲ್ಲಿನ ತಾಳೆತೋಟವೊಂದಕ್ಕೆ ಬರುವಂತೆ ಬ್ಲಾಕ್‌ಮೇಲ್ ಮಾಡಿದ್ದ ಮತ್ತು ಆಕೆಯ ಮೇಲೆ ಎಂಟೂ ಜನರು ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಬಾಲಕಿ ತನ್ನ ಹೆತ್ತವರಿಗೆ ಈ ಬಗ್ಗೆ ತಿಳಿಸಿದ್ದು,ಅವರು ಇಲ್ಲಿಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ವೈದ್ಯರ ಮೂಲಕ ಮಾಹಿತಿ ಪಡೆದ ಪೊಲೀಸರು ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News