ಥಳಿತದ ತೀವ್ರತೆಗೆ ಅಕ್ಬರ್ ಖಾನ್ ರ ಪಕ್ಕೆಲುಬು ಮುರಿತ : ಮರಣೋತ್ತರ ವರದಿ

Update: 2018-07-22 15:06 GMT

ಹೊಸದಿಲ್ಲಿ, ಜು.22: ರಾಜಸ್ತಾನದ ಆಲ್ವಾರ್‌ನಲ್ಲಿ ಶನಿವಾರ ಗುಂಪು ಹಲ್ಲೆಯಿಂದ ಮೃತಪಟ್ಟ 28ರ ಹರೆಯದ ಅಕ್ಬರ್ ಖಾನ್ ಅವರ ಶವಪರೀಕ್ಷೆಯ ವರದಿಯಲ್ಲಿ ಶ್ವಾಸಕೋಶಕ್ಕೆ ಆಗಿರುವ ಗಂಭೀರ ಹಾನಿಯಿಂದ ಮರಣ ಸಂಭವಿಸಿದೆ ಎಂದು ತಿಳಿಸಲಾಗಿದೆ.

ರವಿವಾರ ಬಿಡುಗಡೆ ಮಾಡಿರುವ ಮರಣೋತ್ತರ ವರದಿಯಲ್ಲಿ ಮೃತವ್ಯಕ್ತಿಯ ಮೇಲಾದ ಅಮಾನುಷ ಹಲ್ಲೆಯಿಂದ ಪಕ್ಕೆಲುಬು ಮುರಿದ ಕಾರಣ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಅಲ್ಲದೆ ಖಾನ್ ಅವರ ಮಣಿಕಟ್ಟು ಕೂಡಾ ಮುರಿದಿದೆ ಎಂದು ತಿಳಿಸಲಾಗಿದೆ. ದನಗಳನ್ನು ಕಳವು ಮಾಡುತ್ತಿರುವ ಶಂಕೆಯಲ್ಲಿ ಶನಿವಾರ ರಾಜಸ್ತಾನದ ಆಲ್ವಾರ್‌ನಲ್ಲಿ ಅಕ್ಬರ್ ಖಾನ್ ಮೇಲೆ ದಾಳಿ ನಡೆಸಿದ್ದ ಗುಂಪು ಅವರನ್ನು ತೀವ್ರವಾಗಿ ಥಳಿಸಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿತ್ತು. ಆದರೆ ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಗ್ಯಾನ್‌ದೇವ್ ಅಹುಜಾ, ಹಲ್ಲೆ ನಡೆಯುತ್ತಿದ್ದ ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಅಧಿಕಾರಿಗಳು ಖಾನ್‌ರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರನ್ನು ಥಳಿಸಿದ್ದರು ಎಂದು ಹೇಳಿಕೆ ನೀಡಿದ್ದರು.

 ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದಿರುವ ಅಹುಜಾ, ತನಗೆ ದೊರೆತ ಮಾಹಿತಿಯಂತೆ ಪೊಲೀಸರು ಖಾನ್‌ರನ್ನು ಠಾಣೆಗೆ ಕರೆದೊಯ್ದು ಥಳಿಸಿದ್ದಾರೆ. ಗೋ ಕಳ್ಳಸಾಗಣೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂಬ ಸಂದೇಶ ನೀಡುವ ಉದ್ದೇಶ ಅವರದ್ದಾಗಿತ್ತು ಎಂದಿದ್ದಾರೆ.

    ಘಟನೆಯ ಪ್ರತ್ಯಕ್ಷದರ್ಶಿಯಾಗಿರುವ ವಿಶ್ವಹಿಂದು ಪರಿಷದ್‌ನ ಸ್ಥಳೀಯ ಮುಖಂಡ ನವಲ್ ಕಿಶೋರ್ ಶರ್ಮ ಶಾಸಕರ ಹೇಳಿಕೆಗೆ ಪೂರಕವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಮೂರು ತಾಸುಗಳ ಬಳಿಕ ಖಾನ್‌ರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದಿದ್ದಾರೆ. ಶನಿವಾರ ಬೆಳಗ್ಗಿನ ಜಾವ ಸುಮಾರು 1 ಗಂಟೆಗೆ ತಾನು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಅವರು ಬೆಳಿಗ್ಗೆ 4:00 ಗಂಟೆಯ ವೇಳೆಗೆ ಖಾನ್‌ರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.ಆಸ್ಪತ್ರೆ ಘಟನಾ ಸ್ಥಳದಿಂದ ಕೇವಲ 4 ಕಿ.ಮೀ. ದೂರವಿದೆ ಎಂದು ತಿಳಿಸಿರುವ ಶರ್ಮ, ಪ್ರಕರಣಕ್ಕೆ ಸಂಬಂಧಿಸದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News