ಸಿಬಿಐ ವಿಶೇಷ ನಿರ್ದೇಶಕ ಅಸ್ಥಾನಾರ ತಂಡದ ಸದಸ್ಯರ ಅಧಿಕಾರಾವಧಿ ವಿಸ್ತರಣೆ

Update: 2018-07-22 15:16 GMT

 ಹೊಸದಿಲ್ಲಿ,ಜು.22: ಸಿಬಿಐ ನಿರ್ದೇಶಕ ಅಲೋಕ ವರ್ಮಾ ಮತ್ತು ಎರಡನೇ ಅತ್ಯಂತ ಹಿರಿಯ ಅಧಿಕಾರಿಯಾಗಿರುವ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟದ ವರದಿಗಳ ನಡುವೆಯೇ ಕೇಂದ್ರ ಜಾಗೃತ ಆಯೋಗ(ಸಿವಿಸಿ)ವು ಕೆಲವು ಪ್ರಮುಖ ಸಿಬಿಐ ಅಧಿಕಾರಿಗಳ ಅಧಿಕಾರಾವಧಿ ವಿಸ್ತರಣೆಗೆ ಹಸಿರು ನಿಶಾನೆಯನ್ನು ತೋರಿಸಿದೆ. ಇವರ ಪೈಕಿ ಅಸ್ಥಾನಾರ ತಂಡದ ಸದಸ್ಯರಾಗಿ ಕೆಲವು ಪ್ರಮುಖ ಪ್ರಕರಣಗಳನ್ನು ನಿರ್ವಹಿಸಿದ್ದ ಅಧಿಕಾರಿಗಳೂ ಸೇರಿದ್ದಾರೆ.

ಕೇಂದ್ರ ಜಾಗೃತ ಆಯುಕ್ತ ಕೆ.ವಿ.ಚೌಧರಿ ನೇತೃತ್ವದ ಸಮಿತಿಯಿಂದ ಅಧಿಕಾರಾವಧಿ ವಿಸ್ತರಣೆಗೊಂಡಿರುವವರಲ್ಲಿ ಇತ್ತೀಚಿಗೆ ತನ್ನ ಕೇಡರ್ ರಾಜ್ಯ ತ್ರಿಪುರಾಕ್ಕೆ ಮರು ನಿಯೋಜಿಸಲ್ಪಟ್ಟಿದ್ದ, ಆದರೆ ಶೀಘ್ರವೇ ವಾಪಸ್ ಕರೆಸಿಕೊಳ್ಳಲಾಗಿದ್ದ ಡಿಐಜಿ ದರ್ಜೆಯ ಅಧಿಕಾರಿ ಅನಿಷ್ ಪ್ರಸಾದ್ ಅವರೂ ಸೇರಿದ್ದಾರೆ. ಉದ್ಯಮಿ ವಿಜಯ ಮಲ್ಯ ಪ್ರಕರಣ ಸೇರಿದಂತೆ ಪ್ರಮುಖ ಪ್ರಕರಣಗಳ ತನಿಖೆಯಲ್ಲಿ ಅಸ್ಥಾನಾ ಜೊತೆ ನಿಕಟವಾಗಿ ಕಾರ್ಯಾಚರಿಸಿದ್ದ ಇತರ ಇಬ್ಬರು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಭಾರ ಅವಧಿಯನ್ನೂ ಸಮಿತಿಯು ವಿಸ್ತರಿಸಿದೆ.

ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿರುವ ವರ್ಮಾ ಅವರ ಅನುಪಸ್ಥಿತಿಯಲ್ಲಿ ಅಸ್ಥಾನಾ ಅವರು ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಸಿಬಿಐ ಸಿವಿಸಿಗೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಗಳು ನಡೆದಿವೆ.

ಸಿಬಿಐ ನಿರ್ದೇಶಕರು ಸಮಿತಿಗೆ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ. ಸಿವಿಸಿಯಿಂದ ಅಧಿಕಾರಾವಧಿ ವಿಸ್ತರಣೆ ಪಡೆದವರಲ್ಲಿ ಜಂಟಿ ನಿರ್ದೇಶಕರಾದ ಎವೈವಿ ಕೃಷ್ಣ ಮತ್ತು ಸಾಯಿ ಮನೋಹರ ಅರ್ಮಾನೆ ಅವರೂ ಸೇರಿದ್ದಾರೆ.

ಅರ್ಮಾನೆ ಅವರು ವಿಜಯ ಮಲ್ಯ ಆರೋಪಿಯಾಗಿರುವ ಬ್ಯಾಂಕ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಅಸ್ಥಾನಾ ನೇತೃತ್ವದ ವಿಶೇಷ ತನಿಖಾ ತಂಡದ ಭಾಗವಾಗಿದ್ದಾರೆ.

ಇನ್ನೋರ್ವ ಜಂಟಿ ನಿರ್ದೇಶಕ ಮನೀಷ ಕಿಶೋರ ಸಿನ್ಹಾ ಅವರೂ ಅಧಿಕಾರಾವಧಿಯ ವಿಸ್ತರಣೆಯನ್ನು ಪಡೆದಿದ್ದಾರೆ.

ಕಲ್ಲಿದ್ದಲು ಗಣಿ ಹಗರಣದ ತನಿಖೆ ನಡೆಸುತ್ತಿರುವ ಐಪಿಎಸ್ ಅಧಿಕಾರಿ ಪ್ರೇಮಕುಮಾರ ಗೌತಮ ಅವರ ಅಧಿಕಾರಾವಧಿಯನ್ನೂ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News