ಚುನಾವಣೆ ಮೇಲೆ ಕಣ್ಣಿರಿಸಿ ಜಿಎಸ್‌ಟಿ ಕಡಿತ: ಚಿದಂಬರಂ

Update: 2018-07-22 15:25 GMT

ಹೊಸದಿಲ್ಲಿ, ಜು.22: ಕೇಂದ್ರ ಸರಕಾರ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿರಿಸಿ ಜಿಎಸ್‌ಟಿ ದರವನ್ನು ಕಡಿತಗೊಳಿಸಿದೆ ಎಂದು ಟೀಕಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ, ದೇಶದಲ್ಲಿ ಆಗಾಗ್ಗೆ ಚುನಾವಣೆ ನಡೆಯುವುದು ಜನತೆಯ ಹಿತದೃಷ್ಟಿಯಿಂದ ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.

 ಚುನಾವಣೆ ಸನ್ನಿಹಿತವಾದಾಗಲೆಲ್ಲಾ ಸರಕಾರ ತೆರಿಗೆ ಕಡಿತಗೊಳಿಸುತ್ತದೆ. ಇದು ವಿವಿಧ ರಾಜ್ಯಗಳಲ್ಲಿ ಆಗಾಗ್ಗೆ ಚುನಾವಣೆ ನಡೆಯುವ ಹಾಲಿ ಪದ್ಧತಿಯೇ ಮುಂದುವರಿಯಲಿ ಎಂಬ ವಾದಕ್ಕೆ ಪುಷ್ಟಿ ನೀಡುತ್ತದೆ ಎಂದು ವ್ಯಂಗ್ಯವಾಗಿ ವ್ಯಾಖ್ಯಾನಿಸಿದ್ದಾರೆ. ಸುಮಾರು 100 ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಕಡಿತಗೊಳಿಸಿದ ಬಳಿಕವೂ ಜಿಎಸ್‌ಟಿ ಪದ್ದತಿ ಇನ್ನೂ ಸುಧಾರಣೆಯಾಗಿಲ್ಲ. ತಕ್ಷಣ ಕೇಂದ್ರ ಸರಕಾರ ಜಿಎಸ್‌ಟಿಯ ಮೂರು ಹಂತಗಳ ಬಗ್ಗೆ ಪ್ರಕಟಣೆ ನೀಡಬೇಕು ಎಂದವರು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಸರಕಾರ ಈಗ 100 ವಸ್ತುಗಳ ಮೇಲಿನ ಜಿಎಸ್‌ಟಿ ಕಡಿತಗೊಳಿಸಿ, ತ್ರೈಮಾಸಿಕ ರಿಟರ್ನ್ಸ್ ಸಲ್ಲಿಸಲು ಅನುಮತಿ ನೀಡಿದೆ. ಈ ಬಗ್ಗೆ 2017ರಲ್ಲೇ ನಾವು ಸಲಹೆ ನೀಡಿದ್ದೆವು. ಜಿಎಸ್‌ಟಿ ಕಾಯ್ದೆಯಲ್ಲಿ ಇನ್ನೂ ಹಲವು ಲೋಪಗಳಿವೆ. ಈ ಲೋಪಗಳನ್ನು ತೊಲಗಿಸುವ ಇಚ್ಛಾಶಕ್ತಿ ಹಾಗೂ ಕೌಶಲ್ಯ ಈ ಸರಕಾರಕ್ಕೆ ಇರುವ ಬಗ್ಗೆ ನನಗೆ ಸಂಶಯವಿದೆ ಎಂದು ಚಿದಂಬರಂ ಹೇಳಿದ್ದಾರೆ. ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರಕಾರ ಶೇ.28ರ ಹಂತದ ತೆರಿಗೆ ವ್ಯಾಪ್ತಿಗೆ ಒಳಪಡುವ ವಸ್ತುಗಳನ್ನು 228ರಿಂದ 50ಕ್ಕೆ ಇಳಿಸಿದಾಗ ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಚಿದಂಬರಂ ಟೀಕಿಸಿದ್ದರು. ಅಲ್ಲದೆ, “ವಂದನೆಗಳು ಗುಜರಾತ್, ಸಂಸತ್ ಮತ್ತು ಸಾಮಾನ್ಯ ಜ್ಞಾನದಿಂದ ಸಾಧ್ಯವಾಗದ್ದು ನಿನ್ನ ಚುನಾವಣೆಯಿಂದ ಆಗಿದೆ” ಎಂದು ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News