ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸದೆ ಗೋವು ಸಾಗಿಸಿ, ಚಹಾ ಕುಡಿಯಲು ವಾಹನ ನಿಲ್ಲಿಸಿದ್ದ ಪೊಲೀಸರು: ಆರೋಪ

Update: 2018-07-22 16:48 GMT

#"ಪೊಲೀಸರೇ ಜೀಪಿನೊಳಗೆ ಥಳಿಸಿ, ನಿಂದಿಸುತ್ತಿದ್ದರು"

ಜೈಪುರ, ಜು.22: ಗೋಕಳ್ಳ ಸಾಗಣೆ ಶಂಕೆಯಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೊದಲು, ಸುಮಾರು 4 ಗಂಟೆಗಳ ಕಾಲ ಪೊಲೀಸರು ಕಸ್ಟಡಿಯಲ್ಲಿ ಇಟ್ಟಿದ್ದರು ಎಂದು ndtv.com ವರದಿ ಮಾಡಿದೆ. ವಶಪಡಿಸಿಕೊಂಡಿದ್ದ ಗೋವುಗಳನ್ನು ಗೋಶಾಲೆಗೆ ಕಳುಹಿಸಲು ವಾಹನ ವ್ಯವಸ್ಥೆ ಮಾಡಿದ ಪೊಲೀಸರು, ಚಹಾ ಕುಡಿಯಲೆಂದು ನಿಲ್ಲಿಸಿದ್ದು, ನಂತರ ಪೊಲೀಸ್ ಠಾಣೆಗೆ ತೆರಳಿದ್ದರು. ಆನಂತರವೇ ಗಂಭೀರವಾಗಿ ಗಾಯಗೊಂಡಿದ್ದ ಅಕ್ಬರ್ ಖಾನ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಎಂದು ವರದಿಯಾಗಿದೆ.

ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಅಕ್ಬರ್ ಖಾನ್ ಮೃತಪಟ್ಟಿದ್ದಾಗಿ ಪೊಲೀಸರು ಹೇಳಿದ್ದರು. ಘಟನೆಗೆ ಸಂಬಂಧಿಸಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ.

12:41ಕ್ಕೆ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ಎಫ್ ಐಆರ್ ನಲ್ಲಿರುವುದಾಗಿ ಎನ್ ಡಿಟಿವಿ ಕಂಡುಕೊಂಡಿದೆ. ಪೊಲೀಸರು ಸ್ಥಳಕ್ಕೆ 1:20ಕ್ಕೆ ತಲುಪಿದ್ದರು ಎಂದು ಕರೆ ಮಾಡಿದ್ದ ವ್ಯಕ್ತಿ ತಿಳಿಸಿದ್ದಾರೆ. ಪೊಲೀಸರಿಗೆ  ಮಾಹಿತಿ ನೀಡಿದ್ದ ಕಿಶೋರ್ ಎಂಬಾತನ ಮನೆಗೆ ಮೊದಲು ಪೊಲೀಸರು ತೆರಳಿದ್ದರು. ಗೋವುಗಳನ್ನು ಸ್ಥಳೀಯ ಗೋಶಾಲೆಗೆ ಸಾಗಿಸಲು ವಾಹನದ ವ್ಯವಸ್ಥೆ ಮಾಡುವುದು ಅವರು ಉದ್ದೇಶವಾಗಿತ್ತು. "ನನಗೆ ಸದ್ದು ಕೇಳಿಸಿತು. ಜೀಪಿನೊಳಗಿದ್ದ ವ್ಯಕ್ತಿಯನ್ನು ಪೊಲೀಸ್ ಪೇದೆಯೊಬ್ಬ ಥಳಿಸುತ್ತಿದ್ದುದು ಹಾಗು ನಿಂದಿಸುತ್ತಿದ್ದುದು ನನಗೆ ಕೇಳಿಸಿತು" ಎಂದು ಕಿಶೋರ್ ನ ಸಂಬಂಧಿಯೊಬ್ಬರು ತಿಳಿಸಿದ್ದಾಗಿಯೂ, ಆ ವೇಳೆ ಜೀಪಿನಲ್ಲಿದ್ದ ವ್ಯಕ್ತಿ ಜೀವಂತವಿದ್ದರೆಂದು ಹೇಳಿದ್ದಾಗಿಯೂ ಎನ್ ಡಿಟಿವಿ ವರದಿ ಮಾಡಿದೆ.

ನಂತರ ಪೊಲೀಸರು ಚಹಾ ಕುಡಿಯಲು ವಾಹನ ನಿಲ್ಲಿಸಿದ್ದರು. ಗೋವುಗಳನ್ನು ವಾಹನದಲ್ಲಿ ಗೋಶಾಲೆಗೆ ಸಾಗಿಸುವವರೆಗೂ ಕಾದ ಅವರು ಚಹಾ ಕುಡಿಯುತ್ತಿದ್ದರು. ನಾಲ್ಕು ಚಹಾಗಳನ್ನು ತಾನು ನೀಡಿದ್ದಾಗಿ ಅಂಗಡಿಯವ ಹೇಳಿದ್ದಾನೆ.

ಗಾಯಾಳು ವ್ಯಕ್ತಿಯೊಂದಿಗೆ ನಂತರ ಪೊಲೀಸರು ಪೊಲೀಸ್ ಠಾಣೆಗೆ ತೆರಳಿದರು ಎಂದು ಕಿಶೋರ್ ಹೇಳಿದ್ದಾನೆ. 4 ಗಂಟೆಯ ಸುಮಾರಿಗೆ ಅಕ್ಬರ್ ಖಾನ್ ಮೃತಪಟ್ಟ ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಬಗ್ಗೆ ವೈದ್ಯರೊಬ್ಬರು ದೃಢೀಕರಿಸಿದ್ದಾರೆ. ಮೆಡಿಕಲ್ ರಿಜಿಸ್ಟರ್ ಕೂಡ ಇದನ್ನೇ ಹೇಳುತ್ತಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ರಾಜೇಂದ್ರ ಚೌಧರಿ, "ನಾನು ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಈ ಪ್ರಕರಣದ ಬಗ್ಗೆ ನಾನು ಇನ್ನಷ್ಟೇ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಿದೆ. ಆದರೆ ಈ ಪ್ರಕರಣದಲ್ಲಿ ಯಾರೆಲ್ಲಾ ಒಳಗೊಂಡಿದ್ದಾರೆ ಎನ್ನುವುದನ್ನು ನಾವು ತನಿಖೆ ನಡೆಸಲಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News