ಮೈತ್ರಿಕೂಟ ರಚನೆಗೆ ಕಾಂಗ್ರೆಸ್ ಬದ್ಧ: ಸೋನಿಯಾ ಗಾಂಧಿ

Update: 2018-07-22 17:44 GMT

ಹೊಸದಿಲ್ಲಿ, ಜು.22: ಭಾರತದ ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿಯಾಗಿರುವ ಅಪಾಯಕಾರಿ ಆಡಳಿತದ ಕೈಯಿಂದ ದೇಶದ ಜನತೆಯನ್ನು ಪಾರು ಮಾಡಲು ವಿಪಕ್ಷಗಳು ಒಗ್ಗೂಡಬೇಕಿದೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕರೆ ನೀಡಿದ್ದಾರೆ.

ಮೈತ್ರಿಕೂಟ ರಚಿಸುವ ಕಾರ್ಯಕ್ಕೆ ನಾವು ಬದ್ಧರಾಗಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆಸುವ ಕಾರ್ಯಗಳಿಗೆ ಪಕ್ಷದ ಬೆಂಬಲವಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ. ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಪ್ರಧಾನಿ ಮೋದಿ ಮಾಡುತ್ತಿರುವ ಆಡಂಬರದ ಭಾಷಣ ಅವರ ಹತಾಶೆಯ ಪ್ರತಿಧ್ವನಿಯಾಗಿದ್ದು ಮೋದಿ ಸರಕಾರದ ಉಲ್ಟಾ ಕ್ಷಣಗಣನೆ ಆರಂಭವಾಗಿರುವುದರ ದ್ಯೋತಕ ಇದಾಗಿದೆ ಎಂದು ಹೇಳಿದ ಸೋನಿಯಾ, ಆರೆಸ್ಸೆಸ್‌ನ ಸಂಘಟನಾ ಶಕ್ತಿ ಮತ್ತು ಹಣದ ಬಲವನ್ನು ಎದುರಿಸಲು ವಿಪಕ್ಷಗಳು ಕಾರ್ಯತಂತ್ರದ ಮೈತ್ರಿ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

ರಾಹುಲ್ ಗಾಂಧಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಪ್ರಥಮ ಬಾರಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತದ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ನಿರ್ವಹಿಸುತ್ತಿರುವ ಪಾತ್ರ ಹಾಗೂ ವರ್ತಮಾನ ಮತ್ತು ಭವಿಷ್ಯ ಕಾಲದಲ್ಲಿ ಪಕ್ಷ ನಿಭಾಯಿಸಬೇಕಿರುವ ಹೊಣೆಗಾರಿಕೆಯ ಬಗ್ಗೆ ಕಾರ್ಯಕರ್ತರಿಗೆ ವಿವರಿಸಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭೂತಕಾಲ, ವರ್ತಮಾನ ಹಾಗೂ ಭವಿಷ್ಯಕಾಲವನ್ನು ಜೋಡಿಸುವ ಒಂದು ಸಂಪರ್ಕಸೇತು ಎಂದ ಅವರು, ಕಾರ್ಯಕರ್ತರು ಭಾರತದ ದಮನಿತರ ಪರವಾಗಿ ನಿಂತು ಹೋರಾಡಬೇಕು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2022ರ ವೇಳೆಗೆ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ಬಿಜೆಪಿಯ ಹೇಳಿಕೆ ಸಾಧ್ಯವಾಗಬೇಕಿದ್ದರೆ ಕೃಷಿ ಕ್ಷೇತ್ರದಲ್ಲಿ ಶೇ.14ರಷ್ಟು ಬೆಳವಣಿಗೆಯಾಗಬೇಕು. ಆದರೆ ಇಂತಹ ಸನ್ನಿವೇಶ ಎಲ್ಲೂ ಕಾಣುತ್ತಿಲ್ಲ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಸ್ವಯಂಪ್ರಶಂಸೆ ಹಾಗೂ ‘ಜುಮ್ಲಾ’ ಸಂಸ್ಕೃತಿ ಸ್ವೀಕಾರಾರ್ಹವಲ್ಲ ಎಂದು ಮನಮೋಹನ್ ಸಿಂಗ್ ಸಭೆಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News