ಕರ್ನಾಟಕದ ಕೈ ತಪ್ಪಲಿರುವ ತೆಂಗು ಜೀನ್ ಬ್ಯಾಂಕ್

Update: 2018-07-23 07:01 GMT
ಕಿದುವಿನಲ್ಲಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ.

#ಕಿದುವಿನಲ್ಲಿರುವ ಸಿಪಿಸಿಆರ್‌ಐಗೆ ಸ್ಥಳಾಂತರ ಭೀತಿ?

ಸುಬ್ರಹ್ಮಣ್ಯ, ಜು.22: ದಕ್ಷಿಣ ಏಷ್ಯಾದಲ್ಲೇ ಪ್ರಪ್ರಥಮ ತೆಂಗಿನ ಜೀನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಳಿನೆಲೆ ಗ್ರಾಮದ ಕಿದುವಿನಲ್ಲಿರುವ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(ಸಿಪಿಸಿಆರ್‌ಐ) ಇದೀಗ ಸ್ಥಳಾಂತರ ಭೀತಿ ಎದುರಿಸುತ್ತಿದೆ. ಈ ಅಗ್ರಮಾನ್ಯ ಸಂಶೋಧನಾ ಕೇಂದ್ರ ವನ್ನು ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳಿಸಲಿದೆ ಎನ್ನಲಾಗಿದೆ. ಲೀಸ್‌ನ ನವೀಕರಣಕ್ಕೆ ಮೇಲಧಿಕಾರಿಗಳ ನಿರುತ್ಸಾಹ ತೋರುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದರಿಂದ ಕೃಷಿಕರ ಪ್ರಗತಿಗೆ ಮೂಲವಾಗಿದ್ದ ಕೇಂದ್ರವೊಂದು ರಾಜ್ಯದಿಂದ ದೂರ ಸರಿಯುವ ಆತಂಕ ಎದುರಾಗಿದೆ.

ದಕ್ಷಿಣ ಏಷ್ಯಾಕ್ಕೆ ಇರುವ ತೆಂಗಿನ ವಂಶಾಭಿವೃದ್ಧಿ ಬ್ಯಾಂಕ್ ಇದಾಗಿದೆ. ಇಂಡೋನೇಶ್ಯ, ಬ್ರೆಝಿಲ್, ಪಪುವಾ ನ್ಯೂಗಿನಿ, ಐವರಿ ಡಿಕೋಸ್ಟ ಪ್ರಪಂಚದ ಇತರ ಜೀನ್ ಬ್ಯಾಂಕ್‌ಗಳು. ಇದರಿಂದ ಈ ಸಂಸ್ಥೆಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಜನಪ್ರತಿನಿಧಿಗಳು ಈ ಕೃಷಿ ಅಭ್ಯುದಯ ಕೇಂದ್ರವನ್ನು ಉಳಿಸಿ ಬೆಳೆಸುವತ್ತ ಗಮನ ಹರಿಸಬೇಕು. ಅಲ್ಲದೆ ಅರಣ್ಯ ಇಲಾಖೆಯ ಲೀಸ್ ಭೂಮಿಯನ್ನು ತದೇಕ ಪ್ರಕಾರ ಉಳಿಸಿಕೊಳ್ಳಬೇಕು ಎಂಬುದು ಇಲ್ಲಿನ ರೈತರ ಆಗ್ರಹ.

ಅನ್ನದಾತರಿಗೆ ಬೆನ್ನೆಲುಬು: ಕೇರಳ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಸೇರಿದಂತೆ ವಿದೇಶದಿಂದ ಕೂಡಾ ರೈತರು ಇಲ್ಲಿಗೆ ಆಗಮಿಸಿ ಪ್ರಯೋಜನ ಪಡೆಯುತ್ತಿದ್ದರು. ನಶಿಸಿ ಹೋಗುತ್ತಿರುವ ಕೃಷಿ ಅಭಿವೃದ್ಧಿಗೆ ಸಂಸ್ಥೆ ಅನನ್ಯ ಕೊಡುಗೆ ನೀಡಿದೆ. ಕೃಷಿಕರಿಗೆ, ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಕೃಷಿ ಪ್ರಗತಿಗೆ ಈ ಸಂಸ್ಥೆ ಶ್ರಮಿಸಿದೆ.

ಸಂಸ್ಥೆಯನ್ನು ನಂಬಿಕೊಂಡಿರುವ ಸಹಸ್ರಾರು ಕೃಷಿಕರು, ಬದುಕು ಕಟ್ಟಿಕೊಂಡ ನೂರಾರು ಕಾರ್ಮಿಕರು ಸ್ಥಳಾಂತರದಿಂದ ನಿರ್ಗತಿಕರಾಗುವ ಆತಂಕ ಎದುರಾಗಿದೆ. ಅಲ್ಲದೆ ತಾವು ಬೆಳೆಸಿದ ಅಪರೂಪದ ಕೃಷಿ ಪ್ರಭೇದಗಳನ್ನು ಬೇರೆಡೆ ಬೆಳೆಸಲು ಸಾಧ್ಯವಿಲ್ಲದೆ ಕಂಗಲಾಗಿದ್ದಾರೆ. ಈ ಸಂಸ್ಥೆ ವಾರ್ಷಿಕ 1.5ಕೋಟಿ ರೂ. ಆದಾಯ ಹೊಂದಿದೆ.

ಐದು ವಿಭಾಗಗಳಲ್ಲಿ ಸಂಶೋಧನೆ

ವಿಟ್ಲ, ಕಿದು, ಕಾಯಂಕುಳಂ, ಮೋಹಿತ್ ನಗರ್(ಪಶ್ಚಿಮ ಬಂಗಾಳ), ಲಕ್ಷದ್ವೀಪ, ಅಸ್ಸಾಂಗಳಲ್ಲಿ ಇದರ ಕೇಂದ್ರಗಳಿವೆ. ಕಿದುವಿನ 300 ಎಕರೆಯಲ್ಲಿ 18,000 ತೆಂಗು, 15,000 ಅಡಿಕೆ, 5000 ಖೋಖೋ ಸಸಿಗಳಿವೆ. ಸಿಪಿಸಿಆರ್‌ಐನಲ್ಲಿ ಪ್ರಧಾನವಾಗಿ ಐದು ವಿಭಾಗಗಳಾಗಿ ಸಂಶೋಧನೆ ಮಾಡಲಾಗುತ್ತದೆ. ಬೆಳೆಗಳ ಅಭಿವೃದ್ದಿ ನಿಟ್ಟಿನಲ್ಲಿ ಸಂಶೋಧನೆ, ಬೆಳೆಗಳ ಉತ್ಪಾದನೆ, ಬೆಳೆಗಳ ರಕ್ಷಣೆ, ಗಿಡಗಳ ಶರೀರ ವಿಜ್ಞಾನ, ಸಸ್ಯಶಾಸ್ತ್ರ, ಫಸಲಿನ ನಂತರ ಉಪಯೋಗಿಸುವ ತಂತ್ರಜ್ಞಾನವನ್ನು ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿತ್ತು.

ತೆಂಗು ಕೃಷಿಯ ಜೀನ್ ಬ್ಯಾಂಕ್

ಸಿಪಿಸಿಆರ್‌ಐ ಕಿದು ಪ್ರಥಮವಾಗಿ ಬೀಜೋತ್ಪತ್ತಿ ಕೇಂದ್ರವಾಗಿ ಆರಂಭಗೊಂಡಿತು. 2011ರಲ್ಲಿ ಸಂಶೋಧನಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿತು. ಆ ನಂತರ ತೆಂಗು ಬೆಳೆಯ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತೆಂಗು ಬೆಳೆಯಲ್ಲಿ ಹೈಬ್ರೀಡ್ ತಳಿಗಳನ್ನು ಸಂಶೋಧಿಸಿತ್ತು. ಇದೀಗ ಗ್ರಾಮೀಣ ಭಾಗದ ಬಿಳಿನೆಲೆಯಲ್ಲಿನ ಕಿದು ದಕ್ಷಿಣ ಏಷ್ಯಾದ ಏಕೈಕ ತೆಂಗಿನ ಜೀನ್ ಬ್ಯಾಂಕ್ ಆಗಿ ಹೆಸರು ಗಳಿಸಿದೆ. ಕಿದುವಿನಲ್ಲಿ ಸುಮಾರು 95 ಹೆಕ್ಟೇರ್‌ನಲ್ಲಿ ತೆಂಗನ್ನು ಬೆಳೆಸಲಾಗಿದೆ. 7.5 ಎಕರೆಯಲ್ಲಿ ಅಡಿಕೆ, 2.5 ಎಕರೆಯಲ್ಲಿ ಗೇರು ಮತ್ತು ಉಳಿದ ಪ್ರದೇಶಗಳಲ್ಲಿ ಇತರ ಮಿಶ್ರ ಬೆಳೆಯನ್ನು ಬೆಳೆಯಲಾಗಿದೆ.

ಸಿಪಿಸಿಆರ್‌ಐನ ಸಾಧನೆಗಳು

ತೆಂಗಿನಲ್ಲಿ ವಿಶಿಷ್ಟ ತಳಿಗಳಾದ ಚಂದ್ರಕಲ್ಪ, ಕೇರಾಚಂದ್ರ, ಕಲ್ಪಪ್ರತಿಭಾ, ಕಲ್ಪಧೇನು, ಕಲ್ಪಮಿತ್ರ, ಕಲ್ಪತರು, ಚಂದ್ರ ಶಂಕರ, ಕೆರಾ ಶಂಕರ, ಚಂದ್ರಲಕ್ಷ ಮೊದಲಾದ ನೂತನ ಹೈಬ್ರಿಡ್ ತೆಂಗಿನ ತಳಿಗಳನ್ನು ಅನ್ವೇಷಣೆ ಮಾಡಿ ಅದರಲ್ಲಿ ಫಸಲನ್ನು ತೆಗೆದು ಸೈ ಸನಿಸಿಕೊಂಡಿದೆ. ಮಂಗಳ, ಶ್ರೀ ಮಂಗಳ, ಸುಮಂಗಳ, ಸ್ವರ್ಣಮಂಗಳ, ಮೋಹಿತ್‌ನಗರ ಮೊದಲಾದ ಅಡಿಕೆಯ ವಿವಿಧ ಹೈಬ್ರೀಡ್ ತಳಿಗಳನ್ನು ಸಂಶೋಧಿಸಿದೆ. ಈ ತಳಿಗಳನ್ನು ಬೆಳೆದು ರೈತರು ಯಾವ ರೀತಿಯಾಗಿ ಹೆಚ್ಚಿನ ಇಳುವರಿಗಳನ್ನು ಪಡೆಯಬಹುದು ಎಂಬುದನ್ನು ಕೂಡಾ ಸಿಪಿಸಿಆರ್‌ಐ ರೈತರಿಗೆ ಅನೇಕ ವರ್ಷಗಳಿಂದ ಮಾಹಿತಿ ನೀಡುತ್ತಿದೆ.

ವಿನೂತನ ಸಂಶೋಧನೆ ಮೂಲಕ ಹೈಬ್ರಿಡ್ ತಳಿಗಳನ್ನು ಸಂಶೋಧಿಸಿ ಅವುಗಳನ್ನು ಬೆಳೆಯಲು ರೈತರಿಗೆ ಮಾರ್ಗದರ್ಶನ ಮಾಡುತ್ತಿರುವ ಕಿದುವಿನ ಸಿಪಿಸಿಆರ್‌ಐಯು ರೈತರಿಗೆ ವಿನೂತನ ಕೃಷಿಯ ಪಾಠವನ್ನು ಬೋಧಿಸಿದೆ.ಅಲ್ಲದೆ ಗ್ರಾಮೀಣ ಭಾಗದ ರೈತರ ಪ್ರಗತಿಗೆ ಹೆಚ್ಚಿನ ಕೊಡುಗೆ ನೀಡಿದೆ.ಇದರೊಂದಿಗೆ ಕೃಷಿಕರಿಗೆ ಆಧುನಿಕ ಕೃಷಿ ವಿಧಾನದ ಜ್ಞಾನ ಬೋಧಿಸುತ್ತಿದೆ. ಇಂತಹ ಅಗ್ರಮಾನ್ಯ ಸಂಸ್ಥೆ ಸ್ಥಳಾಂತರವಾಗಬಾರದು.

 ರವೀಂದ್ರ ಕುಮಾರ್ ರುದ್ರಪಾದ,

ಪ್ರಗತಿಪರ ಕೃಷಿಕರು ಸುಬ್ರಹ್ಮಣ್ಯ

ಸ್ಥಳಾಂತರದ ವಿರುದ್ಧ ಹೋರಾಟದ ಎಚ್ಚರಿಕೆ

ಕಿದುವಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ(ಸಿಪಿಸಿಆರ್‌ಐ) ನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಹುನ್ನಾರವನ್ನು ತೀವ್ರವಾಗಿ ಖಂಡಿಸುತ್ತೇವೆ. ಕಳೆದ ಹಲವಾರು ವರ್ಷಗಳಿಂದ ರೈತಾಪಿ ವರ್ಗದ ಅಭಿವೃದ್ಧಿಗೆ ಕಾರಣವಾದ ಈ ಸಂಸ್ಥೆಯನ್ನು ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ರೈತರಿಗೆ ಹಿನ್ನಡೆ ಒದಗಿಸುವ ಈ ವ್ಯವಸ್ಥೆಯನ್ನು ಸಾಕಾರಗೊಳಿಸಲು ಬಿಡುವುದಿಲ್ಲ. ಅಲ್ಲದೆ ಸ್ಥಳಾಂತರ ಯೋಜನೆಯನ್ನು ಕೈಬಿಡದಿದ್ದರೆ ರೈತಾಪಿ ವರ್ಗದೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. 

ಕಿಶೋರ್ ಶಿರಾಡಿ, ಸಂಚಾಲಕ,

ಮಲೆನಾಡು ಜನಹಿತ ರಕ್ಷಣಾ ವೇದಿಕೆ

ಹೋರಾಟ ಸಮಿತಿ ಅಸ್ತಿತ್ವಕ್ಕೆ

ಕಿದುವಿನಲ್ಲಿರು ಸಿಪಿಸಿಆರ್‌ಐ ಸಂಸ್ಥೆಯು ರೈತರ ಪ್ರಗತಿಗೆ ಬೆನ್ನೆಲುಬಾಗಿದೆ. ಕರ್ನಾಟಕದ ರೈತರಿಗೆ ಅನ್ಯಾಯ ಮಾಡಿ ಆಂಧ್ರದ ಲಾಬಿಗಾಗಿ ಸ್ಥಳಾಂತರಿಸುವ ಒಳಸಂಚಿನ ವಿರುದ್ಧ ಸಿಪಿಸಿಆರ್‌ಐ ಉಳಿಸಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಈ ಉಳಿಸಿ ಹೋರಾಟ ಸಮಿತಿಯು ಬಿಳಿನೆಲೆ ನೇತೃತ್ವದಲ್ಲಿ ಸಂಶೋಧನಾ ಕೇಂದ್ರವನ್ನು ಕಿದುವಿನಲ್ಲಿ ಉಳಿಸಿಕೊಳ್ಳಲು ಹೋರಾಟ ಹಮ್ಮಿಕೊಳ್ಳಲಾಗುವುದು. 

ಬಾಲಕೃಷ್ಣ ವಾಲ್ತಾಜೆ,

ಸಂಚಾಲಕ, ಸಿಪಿಸಿಆರ್‌ಐ ಉಳಿಸಿ ಹೋರಾಟ ಸಮಿತಿ

ಮುಗಿದ ಗುತ್ತಿಗೆ ಆಂಧ್ರಕ್ಕೆ ಸ್ಥಳಾಂತರ ಸಾಧ್ಯತೆ

ಭಾರತ ಸರಕಾರ ಕೃಷಿ ಮಂತ್ರಾಲಯದ ಭಾರತೀಯ ಕೃಷಿ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಕಿದುವಿನಲ್ಲಿ 1972ರಲ್ಲಿ ಆರಂಭಗೊಂಡಿತು. ಸಿಪಿಸಿಆರ್‌ಐ ಕಿದುವಿನಲ್ಲಿ ಅರಣ್ಯ ಇಲಾಖೆಯಿಂದ ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು 30 ವರ್ಷಕ್ಕೆ ಗುತ್ತಿಗೆ ಪಡೆಯಿತು. ಆದರೆ ಈ ಲೀಸ್ ಅವಧಿಯು 2000ದಲ್ಲಿ ಮುಗಿದಿದೆ. ಸುಪ್ರೀಂಕೋರ್ಟ್ ಆದೇಶದಂತೆ ಅರಣ್ಯ ಇಲಾಖೆ ಭೂಮಿ ಮರಳಿ ಪಡೆಯಲು ಮುಂದಾಗಿತ್ತು. ಜಾಗ ಮರಳಿ ನೀಡುವುದು ಅಥವಾ ಅದಕ್ಕೆ ಬದಲಾಗಿ 300 ಎಕರೆ ಖಾಲಿ ಜಾಗದಲ್ಲಿ ಅರಣ್ಯ ಬೆಳೆಸಲು ತಗಲುವ 12ಕೋಟಿ ರೂ.ಗಳನ್ನು ಭರಿಸಿ ಮತ್ತೆ 30 ವರ್ಷಗಳ ಕಾಲ ಈ ಭೂಮಿಯನ್ನು ಗುತ್ತಿಗೆ ಪಡೆಯಲು ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿತ್ತು.

ಬಳಿಕ ಸಿಪಿಸಿಆರ್‌ಐ ಆಡಳಿತವು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯದ ಆದೇಶವನ್ನು ಮುಂದಿರಿಸಿ ಬದಲಿ ಜಾಗ ಗುರುತಿಸಿ ಅಲ್ಲಿ ಅರಣ್ಯ ಬೆಳೆಸಲು 12ಕೋಟಿ ರೂ. ಒದಗಿಸುವಂತೆ ಕೋರಿತ್ತು. ಪರಿಸರಕ್ಕೆ ಹಾನಿ ಮಾಡುವ ಯಾವ ಅಂಶಗಳು ಕಿದುವಿನಲ್ಲಿ ಅನುಷ್ಠಾನಗೊಳ್ಳುವುದಿಲ್ಲ ಇಲ್ಲಿ ಅರಣ್ಯ ಪರಿಸರಕ್ಕೆ ಪೂರಕವಾದ ಹಸಿರು ವಾತಾವರಣ ಬೆಳೆಸಲಾಗುತ್ತಿದೆ ಆದುದರಿಂದ ವಿನಾಯಿತಿ ನೀಡಬೇಕು ಎಂದು ಕೇಂದ್ರ ಅರಣ್ಯ ಸಚಿವಾಲಯಕ್ಕೆ ಕೇಳಿಕೊಂಡಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿದ ವಿನಾಯಿತಿ ಪಟ್ಟಿಯಲ್ಲಿ ಈ ಸಂಶೋಧನಾ ಕೇಂದ್ರದ ಹೆಸರು ನಮೂದಿಸಿಲ್ಲದ ಕಾರಣ ವಿನಾಯಿತಿ ಸಾಧ್ಯವಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿತ್ತು. ಆದರೆ ಬಳಿಕ ವಿನಾಯಿತಿ ಪಡೆಯಲು ಸಿಪಿಸಿಆರ್‌ಐನ ಉನ್ನತ ಅಧಿಕಾರಿಗಳು ಉತ್ಸಾಹ ತೋರಲಿಲ್ಲ. ಈ ನಡುವೆ ಆಂಧ್ರಪ್ರದೇಶವು ಈ ಕೇಂದ್ರವನ್ನು ತೆರೆಯಲು ಅವಕಾಶ ಕೋರಿ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದೆ. ಆದುದರಿಂದ ಸಂಶೋಧನಾ ಕೇಂದ್ರವು ಆಂಧ್ರ್ಕೆ ಹೋಗುವ ಸಾಧ್ಯತೆ ದಟ್ಟವಾಗಿದೆ.

Writer - ಪ್ರಕಾಶ್ ಸುಬ್ರಹ್ಮಣ್ಯ

contributor

Editor - ಪ್ರಕಾಶ್ ಸುಬ್ರಹ್ಮಣ್ಯ

contributor

Similar News