ಎಲ್ಲಾ ಘೋರ ಅಪರಾಧ ಕೃತ್ಯಗಳಲ್ಲೂ ಬಾಲಾಪರಾಧಿಗಳಿಗೆ ಮರಣದಂಡನೆ ಸಾಧ್ಯವಿಲ್ಲ: ನ್ಯಾ. ಮದನ್ ಲೋಕುರ್

Update: 2018-07-23 14:06 GMT

ಇಂದೋರ್, ಜು.23: ಅತ್ಯಾಚಾರ ಮತ್ತು ಕೊಲೆಯಂತಹ ಪ್ರತಿಯೊಂದು ಘೋರ ಅಪರಾಧ ಕೃತ್ಯಗಳಲ್ಲೂ ಬಾಲಾಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ನ ಬಾಲ ನ್ಯಾಯ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಹೇಳಿದ್ದಾರೆ.

ಇಂತಹ ಪ್ರಕರಣಗಳಲ್ಲಿ ಪುರಾವೆಗಳನ್ನು ಆಧರಿಸಿ ತೀರ್ಪು ನೀಡಲಾಗುತ್ತದೆ. ಪ್ರತಿಯೊಂದು ಅತ್ಯಾಚಾರ ಪ್ರಕರಣ ಅಥವಾ ಕೊಲೆ ಪ್ರಕರಣದಲ್ಲೂ ಏಕೈಕ ಶಿಕ್ಷೆ ಮರಣದಂಡನೆ ಅಲ್ಲ. ನಾವು ಅನಾಗರಿಕರಲ್ಲ ಎಂದು ಅವರು ಹೇಳಿದ್ದಾರೆ. ಬಾಲ ನ್ಯಾಯ ಕಾಯ್ದೆ 2015ರ ಪರಿಣಾಮಕಾರಿ ಅನುಷ್ಠಾನದ ಕುರಿತು ಇಂದೋರ್‌ನಲ್ಲಿ ಶನಿವಾರ ನಡೆದ ನಾಲ್ಕನೇ ಪಶ್ಚಿಮ ವಲಯ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. 17 ವರ್ಷದ ಅಥವಾ 18 ವರ್ಷಕ್ಕಿಂತ ಕೆಳಹರೆಯದ ವ್ಯಕ್ತಿಯೊಬ್ಬ ಘೋರ ಕೃತ್ಯ ನಡೆಸಿರುವ ಕಾರಣ ಆತನಿಗೆ ಮರಣದಂಡನೆ ವಿಧಿಸಬೇಕು ಎಂದು ಹೇಳಲು ಆಗುವುದಿಲ್ಲ. ಸಾಕ್ಷಾಧಾರಗಳ ಆಧಾರದಲ್ಲಿ ಒಂದು ನಿರ್ಧಾರಕ್ಕೆ ಬರಬೇಕಾಗುತ್ತದೆ ಎಂದ ಅವರು, ಬಹುಷಃ ದೇಶದಲ್ಲಿರುವ ಪೋಕ್ಸೊ ನ್ಯಾಯಾಲಯಗಳು ಉದ್ದೇಶಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದಕ್ಕೆ ಕಾರಣಗಳೇನು, ಅವರಿಗೆ ಎದುರಾಗಿರುವ ಸವಾಲುಗಳೇನು ಎಂಬ ಪ್ರಶ್ನೆ ಇಲ್ಲಿ ಹುಟ್ಟುತ್ತದೆ ಎಂದು ಹೇಳಿದರು.

 ಮಕ್ಕಳು ಹಾಗೂ ಬಾಲಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವ ವಿಶೇಷ ನ್ಯಾಯಾಲಯಗಳನ್ನು ಸಂವೇದೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಿದ ಅವರು, ಹೆಚ್ಚುತ್ತಿರುವ ಮಕ್ಕಳ ನಾಪತ್ತೆ ಪ್ರಕರಣ, ಬಾಲಕಾರ್ಮಿಕ ಪ್ರಕರಣ, ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ಸಮಸ್ಯೆಯನ್ನು ನಿಯಂತ್ರಿಸಲು ಮಕ್ಕಳ ಹಕ್ಕು ರಕ್ಷಣಾ ಆಯೋಗ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜೊತೆಗೂಡಿ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ದೀಪಕ್ ಗುಪ್ತ, ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಹೇಮಂತ್ ಗುಪ್ತಾ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News