ರಫೇಲ್ ಒಪ್ಪಂದ: ಕಾಂಗ್ರೆಸ್‌ನಿಂದ ರಕ್ಷಣಾ ಸಚಿವೆ ವಿರುದ್ಧ ಹಕ್ಕುಚ್ಯುತಿ ಮಂಡನೆ ಸಾಧ್ಯತೆ

Update: 2018-07-23 14:18 GMT
ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಜು. 23: ಫ್ರಾನ್ಸ್‌ನೊಂದಿಗೆ ರಫೇಲ್ ಒಪ್ಪಂದದ ಕುರಿತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತನ್ನು ದಾರಿ ತಪ್ಪಿಸಿರುವುದರ ವಿರುದ್ಧ ಕಾಂಗ್ರೆಸ್ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ.

 ರಫೇಲ್ ವಿಮಾನ ಬೆಲೆ ಕಾಂಗ್ರೆಸ್ ಹಾಗೂ ಸರಕಾರದ ನಡುವಿನ ವಿವಾದದ ಪ್ರಮುಖ ಅಂಶವಾಗಿದೆ. ರಫೇಲ್ ವಿಮಾನದ ಬೆಲೆ ಬಹಿರಂಗಗೊಳಿಸುವಂತೆ ಕಾಂಗ್ರೆಸ್ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಫ್ರಾನ್ಸ್‌ನೊಂದಿಗಿನ ಒಪ್ಪಂದದಲ್ಲಿ ರಹಸ್ಯ ನಿಬಂಧನೆ ಇರುವ ಕಾರಣಕ್ಕೆ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ತಿಳಿಸಿತ್ತು. ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ನಾಯಕ ಆನಂದ್ ಶರ್ಮಾ, ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ಅದಕ್ಕಾಗಿ ಸರಕಾರ ಬೆಲೆ ಮುಚ್ಚಿಡಲು ಪ್ರಯತ್ನಿಸುತ್ತಿದೆ. ವಿಮಾನದ ಬೆಲೆ ಒಪ್ಪಂದದ ರಹಸ್ಯ ನಿಬಂಧನೆಯಲ್ಲಿ ಸೇರಿಲ್ಲ ಎಂದಿದ್ದರು. ‘‘ಬೆಲೆ ರಹಸ್ಯ ನಿಬಂಧನೆಯ ಭಾಗವಲ್ಲ ಎಂದು ಫ್ರಾನ್ಸ್ ಸರಕಾರದ ಹೇಳಿಕೆ ಸ್ಪಷ್ಟಪಡಿಸಿತ್ತು. ಸರಕಾರ ಬೆಲೆಯನ್ನು ಕಡ್ಡಾಯವಾಗಿ ಬಹಿರಂಗಗೊಳಿಸಬೇಕು. ರಕ್ಷಣಾ ಸಚಿವರು ಈ ಹಿಂದೆ ಬಹಿರಂಗಗೊಳಿಸಿದ ಸರಿಸುಮಾರು 670 ಕೋ. ರೂ. ಈಗ ಹೇಳುತ್ತಿರುವ ಬೆಲೆಗೆ ಹೊಂದಿಕೆಯಾಗುವುದಿಲ್ಲ. ಈಗ ಪ್ರಧಾನಿ ಅವರು ಬೆಲೆ ಬಹಿರಂಗಪಡಿಸಲು ಹಿಂಜರಿಯುತ್ತಿರುವುದು ಗಮನಿಸಿದರೆ, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದರಲ್ಲಿ ಅನುಮಾನ ಇಲ್ಲ’’ ಎಂದು ಶರ್ಮಾ ಹೇಳಿದ್ದಾರೆ.

ಸರಕಾರ ದೇಶವನ್ನು ದಾರಿತಪ್ಪಿಸುತ್ತಿದೆ: ಎ.ಕೆ. ಆ್ಯಂಟನಿ

ಒಪ್ಪಂದದ ರಹಸ್ಯ ನಿಬಂಧನೆಯ ಕಾರಣಕ್ಕೆ ಬೆಲೆ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ ಎಂಬ ಕೇಂದ್ರ ಸರಕಾರದ ಪ್ರತಿಪಾದನೆ ‘ಸಂಪೂರ್ಣ ತಪ್ಪು’ ಎಂದು ಮಾಜಿ ರಕ್ಷಣಾ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಹೇಳಿದ್ದಾರೆ. ಅವರ ಪ್ರತಿ ವಿಮಾನ ಬೆಲೆ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಪ್ಪಂದವನ್ನು ಮಹಾಲೇಖಪಾಲರು ಹಾಗೂ ಸಂಸತ್‌ನ ಸಾರ್ವಜನಿಕ ಲೆಕ್ಕಾಚಾರ ಸಮಿತಿ ಪರಿಶೀಲನೆ ನಡೆಸಿರುವುದರಿಂದ ರಫೇಲ್ ಜೆಟ್‌ಗಳ ಬೆಲೆ ವಿವರಗಳನ್ನು ಸರಕಾರ ಮುಚ್ಚಿಡಲು ಸಾಧ್ಯವಿಲ್ಲ ಎಂದು ಆ್ಯಂಟನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News