"ನನ್ನಿಂದ ತಪ್ಪಾಗಿದೆ, ನನಗೆ ಶಿಕ್ಷೆ ನೀಡಿ"

Update: 2018-07-23 15:20 GMT

ಆಲ್ವಾರ್, ಜು.23: ಗೋರಕ್ಷಕರಿಂದ ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಅಕ್ಬರ್ ಖಾನ್ ರನ್ನು ಮೂರು ಗಂಟೆ ತಡವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದನ್ನು ಪೊಲೀಸ್ ಪೇದೆಯೊಬ್ಬ ಒಪ್ಪಿಕೊಂಡಿದ್ದು, "ನಾನು ತಪ್ಪು ಮಾಡಿದ್ದೇನೆ" ಎಂದಿದ್ದಾನೆ. ಇದುವರೆಗೂ ಈತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ಮಾರುಕಟ್ಟೆಯಿಂದ ಖರೀದಿಸಿದ್ದ ಎರಡು ಗೋವುಗಳೊಂದಿಗೆ ಮನೆಗೆ ಹಿಂದಿರುಗುತ್ತಿದ್ದಾಗ ಅಕ್ಬರ್ ಖಾನ್ ಹಾಗು ಗೆಳೆಯ ಅಸ್ಲಂ ಮೇಲೆ ದಾಳಿ ನಡೆದಿತ್ತು. ಗೋಕಳ್ಳತನ ಆರೋಪದಲ್ಲಿ ಈ ದಾಳಿ ನಡೆದಿತ್ತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಆದರೆ ಅಕ್ಬರ್ ರನ್ನು ಆಸ್ಪತ್ರೆಗೆ ದಾಖಲಿಸುವಾಗ ಸುಮಾರು 4 ಗಂಟೆಗಳಾಗಿತ್ತು. ಅದಾಗಲೇ ಅಕ್ಬರ್ ಮೃತಪಟ್ಟಿದ್ದರು.

ಅಕ್ಬರ್ ರನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಎಎಸ್ಸೈ ಮೋಹನ್ ಸಿಂಗ್ ಹಾಗು ಚಾಲಕನನ್ನು ವಿಚಾರಣೆ ನಡೆಸಲಾಗಿತ್ತು. "ಹೌದು ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ನನಗೆ ಶಿಕ್ಷೆ ನೀಡಿ. ನಿಮಗೇನು ಬೇಕೋ ಅದನ್ನು ಮಾಡಿ. ನಾನು ತಪ್ಪು ಮಾಡಿದೆ" ಎಂದು ಮೋಹನ್ ಸಿಂಗ್ ಹೇಳುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಪೊಲೀಸ್ ಜೀಪ್ ನಲ್ಲಿಯೇ ಅಕ್ಬರ್ ರಿಗೆ ಥಳಿಸಲಾಗಿತ್ತು ಹಾಗು ನಿಂದಿಸುವುದು ಕೇಳಿಸುತ್ತಿತ್ತು ಎಂದು ಘಟನೆಯ ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News