×
Ad

ವರದಿ ಸಲ್ಲಿಸುವಂತೆ ರಾಜಸ್ಥಾನ ಸರಕಾರಕ್ಕೆ ಕೇಂದ್ರ ಸರಕಾರ ಸೂಚನೆ

Update: 2018-07-23 21:24 IST

ಹೊಸದಿಲ್ಲಿ, ಜು.23: ಅಕ್ರಮ ಗೋ ಸಾಗಾಟದ ಶಂಕೆಯಲ್ಲಿ ರಾಜಸ್ಥಾನದ ಆಲ್ವಾರ್ ಜಿಲ್ಲೆಯಲ್ಲಿ ಅಕ್ಬರ್ ಖಾನ್ ಅವರನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ಕೇಂದ್ರ ಸರಕಾರ ರಾಜಸ್ಥಾನ ಸರಕಾರಕ್ಕೆ ನಿರ್ದೇಶಿಸಿದೆ. ಘಟನೆಯ ವಿವರ, ಭಾಗಿಯಾದವರನ್ನು ಶಿಕ್ಷಿಸಲು ಕೈಗೊಂಡ ಕ್ರಮಗಳು ಹಾಗೂ ಶಾಂತಿ ಕಾಪಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡುವಂತೆ ಗೃಹ ಸಚಿವಾಲಯ ರಾಜಸ್ಥಾನ ಸರಕಾರದಲ್ಲಿ ಕೋರಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಷ್ಟು ಬೇಗ ವರದಿ ನೀಡುವಂತೆ ಕೂಡ ಸಚಿವಾಲಯ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಅಕ್ಬರ್ ಖಾನ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಪೊಲೀಸರು ವಿಳಂಬಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಸಲು ರಾಜಸ್ಥಾನ ಪೊಲೀಸರು ಉನ್ನತ ಮಟ್ಟದ ಸಮಿತಿಯೊಂದನ್ನು ರೂಪಿಸಿದ್ದಾರೆ. ಖಾನ್ ಅವರನ್ನು ಥಳಿಸಿ ಹತ್ಯೆಗೈದ ಬಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದರೊಬ್ಬರು ಪ್ರಶ್ನಿಸಿದ್ದಾರೆ.

"ನಾವು ಶಾಸಕರ ಕಡೆಯ ಜನರು"

"ಅವರು ನನ್ನನ್ನು ಹಾಗೂ ಅಕ್ಬರ್ ನನ್ನು ಹಿಡಿಯಲು ಪ್ರಯತ್ನಿಸಿದರು. ಅಕ್ಬರ್‌ಗೆ ದೊಣ್ಣೆಯಿಂದ ಥಳಿಸಿದರು. ನಾನು ದೂರ ಓಡಿದೆ ಎಂದು ದಾಳಿಯ ಪ್ರಮುಖ ಸಾಕ್ಷಿಯಾಗಿರುವ ಅಕ್ಬರ್ ಅವರ ಗೆಳೆಯ ಪೊಲೀಸರಿಗೆ ನೀಡಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘‘ನೀವು ನಮಗೆ ಏನೂ ಮಾಡಲು ಸಾಧ್ಯವಿಲ್ಲ. ನಾವು ಶಾಸಕರ ಕಡೆಯ ಜನರು ಹಾಗೂ ‘ನಿಮ್ಮನ್ನು ಬೆಂಕಿಗೆ ಹಾಕುತ್ತೇವೆ’’ ಎಂದು ಗುಂಪಿನಲ್ಲಿ ಇದ್ದ ಜನರು ಹೇಳುತ್ತಿರುವುದು ಕೇಳಿದೆ ಎಂದು ಅಸ್ಲಂ ಆರೋಪಿಸಿದ್ದಾರೆ.

ಅಸ್ಲಂ ಅವರು ದಾಳಿಕೋರರ ಹೆಸರನ್ನು ಕೂಡ ತಿಳಿಸಿದ್ದಾರೆ. ‘‘ಅವರು ಪರಸ್ಪರ ಸುರೇಶ್, ವಿಜಯ್, ಪರಮ್‌ಜೀತ, ನರೇಶ್ ಹಾಗೂ ಧರ್ಮೇಂದ್ರ ಎಂದು ಕರೆಯುತ್ತಿದ್ದರು’’ ಎಂದು ಅಸ್ಲಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News