ಪದೇ ಪದೇ ಕಾಡುವ ಮಲೇರಿಯಾಕ್ಕೆ ಕೊನೆಗೂ ಸಿಕ್ಕಿತು ಪರಿಣಾಮಕಾರಿ ಮದ್ದು

Update: 2018-07-23 17:08 GMT

 ಹೊಸದಿಲ್ಲಿ,ಜು.23: 60 ವರ್ಷಗಳ ಸುದೀರ್ಘ ವಿರಾಮದ ಬಳಿಕ ಅಮೆರಿಕದ ಅಧಿಕಾರಿಗಳು ಪದೇ ಪದೇ ಕಾಡುವ ಮಲೇರಿಯಾದ ಚಿಕಿತ್ಸೆಗಾಗಿ ಅಭಿವೃದ್ಧಿಗೊಳಿಸಿರುವ ಮಾತ್ರೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ‘ಟಫೆನೊಕ್ವಿನ್’ ಔಷಧಿಯನ್ನು ‘ಅಪೂರ್ವ ಸಾಧನೆ’ ಎಂದು ಬಣ್ಣಿಸಲಾಗಿದ್ದು,ಅದು ಪ್ಲಾಸ್ಮೊಡಿಯಂ ವಿವಾಕ್ಸ್ ಪರಾವಲಂಬಿ ಕಾರಣವಾಗಿರುವ ಪದೇ ಪದೇ ಕಾಡುವ ಮಲೇರಿಯಾವನ್ನು ಗುಣಪಡಿಸುತ್ತದೆ ಎಂದು ಬಿಬಿಸಿ ವರದಿ ಮಾಡಿದೆ. ವರ್ಷಂಪ್ರತಿ ವಿಶ್ವಾದ್ಯಂತ ಸುಮಾರು 8.5 ಮಿಲಿಯನ್ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಈ ವಿಧದ ಮಲೇರಿಯಾ ಸಹಾರಾದ ದಕ್ಷಿಣಕ್ಕಿರುವ ಆಫ್ರಿಕಾದ ಹೊರಗಿನ ಜನರನ್ನು ಕಾಡುವ ರೋಗವಾಗಿದೆ. ಹಲವಾರು ಬಾರಿ ಮರುಜಾಗ್ರತಗೊಳ್ಳುವ ಮುನ್ನ ಈ ರೋಗವು ಮಾನವನ ಶರೀರದಲ್ಲಿ ಸುಪ್ತವಾಗಿರುತ್ತದೆ. ಹೀಗಾಗಿ ಸೋಂಕಿತ ವ್ಯಕ್ತಿ ತನಗೆ ಗೊತ್ತಿಲ್ಲದೆ ಪ್ಲಾಸ್ಮೊಡಿಯಂ ವಿವಾಕ್ಸ್ ಪರಾವಲಂಬಿಗಳ ಆಗರವಾಗಿರುತ್ತಾನೆ. ಸಾಮಾನ್ಯವಾಗಿ ಯಕೃತ್ತಿನಲ್ಲಿ ಅಡಗಿಕೊಂಡಿರುವ ಇವುಗಳನ್ನು ಶರೀರದಿಂದ ಹೊರಕ್ಕೆ ಹಾಕುವಲ್ಲಿ ನೂತನ ಔಷಧಿಯು ನೆರವಾಗುತ್ತದೆ.

ಈ ಔಷಧಿ ಪರಿಣಾಮಕಾರಿಯಾಗಿದೆಯಾದರೂ ಅದನ್ನು ತುಂಬ ಜಾಗ್ರತೆಯಿಂದ ಸೇವಿಸಬೇಕು ಎಂದು ಆಹಾರ ಮತ್ತು ಔಷಧಿ ಆಡಳಿತ(ಎಫ್‌ಡಿಎ)ವು ಎಚ್ಚರಿಕೆ ನೀಡಿದೆ. ಈಗಾಗಲೇ ಜಿ6ಪಿಡಿ ಕೊರತೆ ಎಂಬ ಕಿಣ್ವ ಸಮಸ್ಯೆಯನ್ನು ಹೊಂದಿರುವವರು ಈ ಔಷಧಿಯನ್ನು ಸೇವಿಸಿದರೆ ತೀವ್ರ ರಕ್ತಹೀನತೆಗೆ ಗುರಿಯಾಗುತ್ತಾರೆ. ಮಾನಸಿಕ ಅಸ್ವಸ್ಥತೆ ಹೊಂದಿರುವವರು ಈ ಔಷಧಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಮಸ್ಯೆಗಳನ್ನೆದುರಿಸಬೇಕಾಗುತ್ತದೆ ಎಂದು ಅದು ತಿಳಿಸಿದೆ.

ಟಫೆನೊಕ್ವಿನ್‌ನ ಒಂದೇ ಡೋಸ್‌ನಿಂದ ಯಕೃತ್ತಿನಲ್ಲಿರುವ ಪರಾವಲಂಬಿಗಳು ನಿರ್ಮೂಲನಗೊಳ್ಳುವ ಸಾಮರ್ಥ್ಯವು ಅಪೂರ್ವ ಸಾಧನೆಯಾಗಿದೆ. ಇದು ಕಳೆದ 60 ವರ್ಷಗಳಲ್ಲಿ ಮಲೇರಿಯಾ ಚಿಕಿತ್ಸೆಯಲ್ಲಿ ಅತ್ಯಂತ ಮಹತ್ವದ ಆವಿಷ್ಕಾರವಾಗಿದೆ ಎಂದು ಆಕ್ಸ್‌ಫರ್ಡ್ ವಿವಿಯ ಪ್ರೊ.ರಿಕ್ ಪ್ರೈಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಫೆನೊಕ್ವಿನ್ ‘ಕ್ರಿಂಟಾಫೆಲ್’ ಎಂಬ ಬ್ರಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News