ಕಷ್ಟಕುಲದಲ್ಲಿ ಹುಟ್ಟಿದ ಕರ್ಮ

Update: 2018-07-23 18:27 GMT

ಕಷ್ಟಕುಲದಲ್ಲಿ ಹುಟ್ಟಿದ ಕರ್ಮವ ಕಳೆದು

ಮುಟ್ಟಿ ಪಾವನ ಮಾಡಿ, ಕೊಟ್ಟನಯ್ಯಿ ಎನ್ನ ಕರಸ್ಥಳಕೆ ಲಿಂಗವ.
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯ.
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿ,
ಎನ್ನ ಅರಿವಿನಲ್ಲಿ ಪ್ರಸಾದವ ನೆಲೆಗೊಳಿಸಿದ.
ಇಂತೀ ತ್ರಿಸ್ಥಾನವ ಶುದ್ಧ ಮಾಡಿದ ಬಸವಣ್ಣನ ಕರುಣದಿಂದ
ಪ್ರಭುವಿನ ಶ್ರೀಪಾದವ ಕಂಡು ಬದುಕಿದೆನು
ಕಾಣಾ ಅಭಿನವ ಮಲ್ಲಿಕಾರ್ಜುನ.

                                -ಡೋಹರ ಕಕ್ಕಯ್ಯ

ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದ ಆದ್ಯ ವಚನಕಾರ ಡೋಹರ ಕಕ್ಕಯ್ಯನವರ ಸಮಾಧಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಕ್ಕೇರಿಯಲ್ಲಿದೆ. ‘ಬೊಪ್ಪನು ನಮ್ಮ ಡೋಹರ ಕಕ್ಕಯ್ಯ’ ಎಂದು ಬಸವಣ್ಣನವರು ಮನದುಂಬಿ ಹೇಳಿದ್ದಾರೆ. ತೊಗಲು ಹದ ಮಾಡುವ ಕಾಯಕದ ಕಕ್ಕಯ್ಯನವರು ಕಲ್ಯಾಣಕ್ಕೆ ಬರುವ ಮೊದಲು ಮಾಳವ ದೇಶದ ಅರಸನಲ್ಲಿ ಸಬಳ (ಈಟಿ)ವನ್ನು ಆಯುಧವನ್ನಾಗಿ ಮಾಡಿಕೊಂಡ ಯೋಧರಾಗಿದ್ದರು.
ಬಸವಣ್ಣನವರ ಪವಾಡ ಸದೃಶ ಜಾತಿವಿನಾಶ ಚಳವಳಿಯ ಬಗ್ಗೆ ತಿಳಿದುಕೊಂಡ ಕಕ್ಕಯ್ಯನವರು ಕಲ್ಯಾಣಕ್ಕೆ ಬಂದು ಉಳಿದುಕೊಂಡರು. ಕಲ್ಯಾಣಕ್ಕೆ ಬಂದ ನಂತರ ಅವರಿಗಾದ ಅನುಭವವನ್ನು ಕಕ್ಕಯ್ಯನವರು ಈ ವಚನದಲ್ಲಿ ಮನಮುಟ್ಟುವಂತೆ ಹೇಳಿದ್ದಾರೆ. ಕಂದಾಚಾರದ ಸಮಾಜದಲ್ಲಿ ತುಳಿತಕ್ಕೊಳಗಾಗಿ ಬಳಲಿದ ದಲಿತರು, ಬಸವಣ್ಣನವರು ರೂಪಿಸಿದ ಮಾನವ ಘನತೆಯ ಸಮಾಜದಲ್ಲಿ ಹೇಗೆ ವಿಮೋಚನೆಯ ಸುಖವನ್ನು ಅನುಭವಿಸಿದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News