ಉತ್ತರಕ್ಕೆ ಮಾದರಿಯಾದ ದಕ್ಷಿಣ

Update: 2018-07-24 05:02 GMT

ಕಳೆದ ಚುನಾವಣೆಯ ಸಂದರ್ಭದಲ್ಲಿ ಅಮಿತ್ ಶಾ ಕೇರಳಕ್ಕೆ ಆಗಮಿಸಿ, ಅಲ್ಲಿನ ಆಡಳಿತದ ಕುರಿತಂತೆ ವ್ಯಂಗ್ಯದ ಮಾತುಗಳನ್ನು ಆಡಿದ್ದರು. ಕೇರಳ ಉಗ್ರಗಾಮಿಗಳ ತಾಣವೆಂದೂ, ಅಲ್ಲಿನ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದೂ ಅವರು ದೂರಿದ್ದರು. ಕೇರಳದ ಜನರು ಅಮಿತ್ ಶಾ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ಸಾಮಾಜಿಕ ಜಾಲ ತಾಣಗಳಲ್ಲಿ ‘ಪೋ ಮೋನೆ ಶಾ’ ಎಂಬ ಆಂದೋಲನವನ್ನೂ ಶುರು ಮಾಡಿದ್ದರು. ದಕ್ಷಿಣ ಭಾರತದ ಕುರಿತಂತೆ ಬಿಜೆಪಿಯ ವರಿಷ್ಠರಿಗೆ ತೀವ್ರ ತಾತ್ಸಾರ ಭಾವನೆಗಳಿರುವುದು ಇಂದು ನಿನ್ನೆಯೇನೂ ಅಲ್ಲ. ಕೇರಳವೆಂದಲ್ಲ, ತಮಿಳು ನಾಡು, ಕರ್ನಾಟಕದ ಕುರಿತಂತೆಯೂ ಅವರು ಹೀಗಳೆಯುವ ಮಾತನ್ನಾಡುತ್ತಾ ಬಂದಿದ್ದಾರೆ. ಇದಕ್ಕೆ ತಾಳಹಾಕುವವರಂತೆ ಕರ್ನಾಟಕದ ಕೆಲವು ಬಿಜೆಪಿ ನಾಯಕರು ‘ಗುಜರಾತ್ ಮಾದರಿ ಸರಕಾರವನ್ನು ಕರ್ನಾಟಕಕ್ಕೆ ನೀಡುತ್ತೇವೆ’ ಎಂಬ ಹೇಳಿಕೆ ನೀಡಿ ಉತ್ತರಭಾರತದ ನಾಯಕರನ್ನು ಖುಷಿಪಡಿಸಿದ್ದರು.

ದಕ್ಷಿಣ ಭಾರತೀಯರು ಉತ್ತರ ಭಾರತೀಯರಿಂದ ಆಳಿಸಿಕೊಳ್ಳುವುದಕ್ಕಾಗಿಯೇ ಇರುವವರು ಎಂಬ ಮನಸ್ಥಿತಿ ಹಿಂದಿನಿಂದಲೂ ಇದೆ. ಬಿಜೆಪಿ ಮುಖಂಡನೊಬ್ಬ, ದಕ್ಷಿಣ ಭಾರತೀಯರ ಕುರಿತು ‘ಜನಾಂಗೀಯ’ ಹಿನ್ನೆಲೆಯಿಟ್ಟ್ಲು ಮಾತನಾಡಿದ್ದು ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಬಿಜೆಪಿ ನಾಯಕರ ಈ ಮನಸ್ಥಿತಿಗೆ ಕಾರಣವೇನು ಎನ್ನುವುದನ್ನು ಹುಡುಕುವುದಕ್ಕೆ ಕಷ್ಟ ಪಡಬೇಕಾಗಿಲ್ಲ. ದಕ್ಷಿಣ ಭಾರತ, ಬಿಜೆಪಿ ಮತ್ತು ಆರೆಸ್ಸೆಸ್‌ನ ಬ್ರಾಹ್ಮಣವಾದಿ ಸಿದ್ಧಾಂತಕ್ಕೆ ಪ್ರಬಲ ಪ್ರತಿರೋಧವನ್ನು ಒಡ್ಡುತ್ತಾ ಬಂದಿದೆ. ದಕ್ಷಿಣ ಭಾರತದ ದ್ರಾವಿಡ ಚಳವಳಿ ಇಂದಿಗೂ ಸಂಘಪರಿವಾರ ಚಿಂತನೆಗಳಿಗೆ ಬೀತಿ ಹುಟ್ಟಿಸುತ್ತಿದೆ. ಕರ್ನಾಟಕವೊಂದು ಬಿಟ್ಟರೆ, ಬಿಜೆಪಿಗೆ ದಕ್ಷಿಣ ಭಾರತದ ಯಾವುದೇ ರಾಜ್ಯಗಳಲ್ಲಿ ಬೇರೂರಲು ಸಾಧ್ಯವಾಗಿಲ್ಲ. ಕರ್ನಾಟಕದಲ್ಲೂ ಅದು ಪೂರ್ಣ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಆದುದರಿಂದಲೇ ಅದು ದಕ್ಷಿಣ ಭಾರತೀಯರ ಕುರಿತಂತೆ ಸದಾ ಅಸಹನೆಯನ್ನು ಹೊಂದಿದೆ. ಈ ಭಾಗದ ಕುರಿತಂತೆ ಪೂರ್ವಾಗ್ರಹಗಳನ್ನು ಬಿತ್ತಲು ಗರಿಷ್ಠ ಶ್ರಮ ನಡೆಸುತ್ತಿದೆ. ಆರೆಸ್ಸೆಸ್‌ಗೆ ತೀವ್ರ ಸವಾಲು ಹಾಕುತ್ತಿರುವ ಕೇರಳದ ಕುರಿತಂತೆ ಕೇಂದ್ರದ ವರಿಷ್ಠರು ತಿಂಗಳಿಗೊಮ್ಮೆಯಾದರೂ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ, ಬಿಜೆಪಿಯ ಎಲ್ಲ ಆರೋಪ,ಟೀಕೆ, ಪೂರ್ವಾಗ್ರಹಗಳನ್ನು ಅಲ್ಲಗಳೆಯುವಂತೆ ಪಿಎಸಿ ಸಮೀಕ್ಷೆಯೊಂದು ಹೊರಬಿದ್ದಿದೆ.

ದೇಶದಲ್ಲಿ ಅತ್ಯುತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳು ಉತ್ತಮ ನಿರ್ವಹಣೆಯನ್ನು ತೋರಿಸುತ್ತಿರುವುದನ್ನು ಇದು ಎತ್ತಿ ಹಿಡಿದಿದೆ. ಬಿಜೆಪಿ ಸದಾ ಟೀಕಿಸುತ್ತಾ ಬಂದಿರುವ ಕೇರಳ ರಾಜ್ಯ, ಅತ್ಯುತ್ತಮ ಆಡಳಿತದಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಪಿಎಐ ಹೇಳಿದೆ. ಕೇರಳದ ಬಳಿಕದ ಸ್ಥಾನಗಳನ್ನು ತಮಿಳುನಾಡು, ತೆಲಂಗಾಣ ಮತ್ತು ಕರ್ನಾಟಕ ಹಂಚಿಕೊಂಡಿವೆೆ. ಆ ಬಳಿಕ ಗುಜರಾತ್ ರಾಜ್ಯವಿದೆ. ಹಿಂಸೆ, ಗುಂಪು ಥಳಿತ ಇವುಗಳಿಗೆ ಕುಖ್ಯಾತವಾಗಿರುವ ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್‌ಗಳು ಕೊನೆಯ ಸ್ಥಾನದಲ್ಲಿವೆೆ.

1994ರಲ್ಲಿ ಖ್ಯಾತ ಆರ್ಥಿಕ ತಜ್ಞ ದಿವಂಗತ ಸಾಮ್ಯುವೆಲ್ ಪಾಲ್ ಅವರಿಂದ ಪಿಎಸಿಯು ಸ್ಥಾಪನೆಗೊಂಡಿತು. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಸಾಧಿಸಿದ ಸಾಧನೆಗಳ ಲಭ್ಯ ದತ್ತಾಂಶಗಳ ಆಧಾರದಲ್ಲಿ ಅದು ವರದಿಯನ್ನು ಬಿಡುಗಡೆ ಮಾಡುತ್ತದೆ. ಒಂದು ರಾಜ್ಯದಲ್ಲಿ ಮಕ್ಕಳು, ಮಹಿಳೆಯರು ಎಷ್ಟರಮಟ್ಟಿಗೆ ಸುರಕ್ಷಿತರಾಗಿದ್ದಾರೆ? ಅಗತ್ಯ ಮೂಲಸೌಕರ್ಯ ಎಷ್ಟರ ಮಟ್ಟಿಗೆ ಜಾರಿಗೊಳಿಸಲ್ಪಟ್ಟಿದೆ, ಸಾಮಾಜಿಕ ರಕ್ಷಣೆ ಎಷ್ಟರಮಟ್ಟಿಗಿದೆ ಎನ್ನುವುದನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಮೀಕ್ಷೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿಯೂ ರಾಜ್ಯಗಳನ್ನು ವಿಂಗಡಿಸಲಾಗಿದೆ. ಈ ಎಲ್ಲ ಆಧಾರಗಳಿಂದ ಕೇರಳ ಅತ್ಯುತ್ತಮ ಆಡಳಿತ ನೀಡುವ ರಾಜ್ಯವಾಗಿ ಮೂಡಿ ಬಂದಿದೆ. ಬಿಜೆಪಿ ಆಡಳಿತದಲ್ಲಿರುವ ಬಹುತೇಕ ರಾಜ್ಯಗಳು ಕಳಪೆ ಸಾಧನೆಯನ್ನು ಮಾಡಿರುವುದೂ ಇದೇ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಕೇವಲ ಭಾವನಾತ್ಮಕವಾಗಿ ರಾಜಕೀಯ ಮಾಡುವವರಿಂದ ಉತ್ತಮ ಆಡಳಿತವನ್ನು ನೀಡಲು ಸಾಧ್ಯವಾಗುವುದಿಲ್ಲ ಎನ್ನುವ ಅಂಶವನ್ನು ಈ ಸಮೀಕ್ಷೆ ಪರೋಕ್ಷವಾಗಿ ಹೇಳುತ್ತಿದೆ.

ಪಿಎಸಿ ಕರ್ನಾಟಕದ ಸಮೀಕ್ಷೆ ಮಾಡುತ್ತಿರುವ ಸಂದರ್ಭದಲ್ಲಿ ರಾಜ್ಯವನ್ನು ಆಳುತ್ತಿದ್ದುದು ಸಿದ್ದರಾಮಯ್ಯ ನೇತೃತ್ವದ ಸರಕಾರ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರಕಾರವನ್ನು ಅನಗತ್ಯವಾಗಿ ಬಿಜೆಪಿ ಟೀಕಿಸುತ್ತಿತ್ತು. ಯಾವುದೇ ದಾಖಲೆಗಳು ಕೈಯಲ್ಲಿಲ್ಲದ್ದಿದ್ದರೂ, ಭ್ರಷ್ಟ ಸರಕಾರ ಎಂದು ಬಿಂಬಿಸಲು ಅದು ಸಾಕಷ್ಟು ಯತ್ನಿಸಿತ್ತು. ಆದರೆ ಸಾಮಾಜಿಕ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮಾಡಿರುವ ಸುಧಾರಣೆಗಳು ಏನು ಎನ್ನುವುದು ಸಮೀಕ್ಷೆಯಿಂದ ಹೊರ ಬಿದ್ದಿದೆ. ಗುಜರಾತ್ ಮಾದರಿಯ ಆಡಳಿತ ನೀಡುತ್ತೇನೆ ಎಂದು ಈ ಹಿಂದೆ ಬಿಜೆಪಿಯ ನಾಯಕ ಯಡಿಯೂರಪ್ಪ ಘೋಷಿಸಿದ್ದರೆ, ಅದೇ ಗುಜರಾತ್‌ಗಿಂತ ಕರ್ನಾಟಕ ಮೇಲಿದೆ ಎನ್ನುವುದನ್ನು ಸಿದ್ದರಾಮಯ್ಯ ತನ್ನ ಆಡಳಿತದಿಂದ ತೋರಿಸಿದರು. ದುರದೃಷ್ಟವಶಾತ್, ಕಳೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಮತ್ತೆ ಹಿಂದೂ-ಮುಸ್ಲಿಮ್ ಭಾವನಾತ್ಮಕ ರಾಜಕೀಯದ ಮೂಲಕ ಸಿದ್ದರಾಮಯ್ಯ ಅವರ ಅಭಿವೃದ್ಧಿ ರಾಜಕಾರಣವನ್ನು ಸೋಲಿಸಿತು. ದಕ್ಷಿಣ ಭಾರತದ ಮೇಲೆ ಹಿಂದಿ ಹೇರಿಕೆ ಮಾಡುವ ಮೂಲಕ, ಇಲ್ಲಿನ ಪ್ರಾದೇಶಿಕತೆಯನ್ನು ಸಂಪೂರ್ಣ ನಾಶ ಮಾಡಲು ಹೊರಟಿರುವ ಉತ್ತರ ಭಾರತದ ನಾಯಕರು ಈ ಭಾಗದ ಸರಕಾರಗಳಿಂದ ಕಲಿಯುವುದು ಸಾಕಷ್ಟಿದೆ. ಇಂದು ಉತ್ತರ ಭಾರತ, ಗುಂಪುಕೊಲೆಗಡುಕರ ನೆಲವಾಗಿ ಗುರುತಿಸಲ್ಪಡುತ್ತಿದೆ.

ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್‌ನಂತಹ ರಾಜ್ಯಗಳು ಇಂದು ಗುರುತಿಸುತ್ತಿರುವುದು ನಕಲಿ ಗೋರಕ್ಷಕ ಹಿಂಸಾಚಾರಗಳಿಗಾಗಿ. ವಿಶ್ವ ಇದನ್ನು ಗಂಭೀರವಾಗಿ ಗಮನಿಸುತ್ತಿದೆ ಎಂಬ ಅರಿವು ಕೂಡ ಪ್ರಧಾನಿಗಿಲ್ಲ. ಸುಪ್ರೀಂಕೋರ್ಟ್ ಈ ಹಿಂಸಾಚಾರಗಳ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದೆಯಾದರೂ, ಪ್ರಧಾನಿ ನರೇಂದ್ರ ಮೋದಿ ತುಟಿ ಬಿಚ್ಚುತ್ತಿಲ್ಲ. ಇಂದು ಈ ಹಿಂಸೆ ಮತ್ತು ದ್ವೇಷ ರಾಜಕಾರಣವನ್ನು ದಕ್ಷಿಣ ಭಾರತಕ್ಕೆ ಹರಡಲು ಬಿಜೆಪಿ ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಅದರ ಪ್ರಯೋಗಶಾಲೆಯಾಗಿ ಕರ್ನಾಟಕವನ್ನು ಆರಿಸಿಕೊಂಡಿದೆ. ಕರಾವಳಿಯಲ್ಲಿ ಆ ಪ್ರಯೋಗವನ್ನು ಈಗಾಗಲೇ ಯಶಸ್ವಿಯಾಗಿ ಮಾಡಿ ಮುಗಿಸಿದೆ.

ಉತ್ತರ ಭಾರತದ ಈ ದ್ವೇಷ ರಾಜಕಾರಣವನ್ನು ದಕ್ಷಿಣ ಭಾರತದಲ್ಲಿ ಹರಡಲು ಬಿಜೆಪಿ ಯಶಸ್ವಿಯಾದದ್ದೇ ಆದರೆ ಅದರ ಪರಿಣಾಮ ನೇರವಾಗಿ ಅಭಿವೃದ್ಧಿಯ ಮೇಲೆ ಬೀರುತ್ತದೆ. ಸಾಮಾಜಿಕ ಆರ್ಥಿಕ ಕ್ಷೇತ್ರಗಳು ಹಿನ್ನಡೆ ಅನುಭವಿಸುತ್ತದೆ. ಅತ್ಯುತ್ತಮ ಆಡಳಿತಕ್ಕಾಗಿ ಅಗ್ರಸ್ಥಾನದಲ್ಲಿರುವ ದಕ್ಷಿಣ ಭಾರತವು ಹಿಂದಕ್ಕೆ ಚಲಿಸಲಾರಂಭಿಸುತ್ತದೆ. ಈಗಾಗಲೇ ಉತ್ತರ ಭಾರತ ‘ಗುಂಪು ಹತ್ಯೆ’ ವೈರಸ್ ದಕ್ಷಿಣ ಭಾರತಕ್ಕೂ ಕಾಲಿಟ್ಟಿದೆ. ಕೆಲವೆಡೆ ಹತ್ಯೆಗಳು ನಡೆದಿವೆ. ಇದು ಪೂರ್ಣ ಪ್ರಮಾಣದಲ್ಲಿ ವಿಸ್ತರಿಸುವ ಮುನ್ನ ಈ ವೈರಸ್‌ಗೆ ಮದ್ದು ಹುಡುಕುವ ಕೆಲಸ ಮಾಡಬೇಕು. ದಕ್ಷಿಣ ಭಾರತ ಎಂದಿಗೂ ಉತ್ತರ ಭಾರತವಾಗುವುದು ಬೇಡ. ಅದು ಸದಾ ಉತ್ತರ ಭಾರತದ ನಾಯಕರಿಗೆ ಆಡಳಿತವನ್ನು ಹೇಗೆ ನೀಡಬೇಕು ಎನ್ನುವುದಕ್ಕೆ ಮಾದರಿಯಾಗಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News