ಮೋಹನ್‍ಲಾಲ್ ವಿರುದ್ಧ ಮನವಿಗೆ ಸಹಿ ಹಾಕಿಲ್ಲ ಎಂದ ಪ್ರಕಾಶ್ ರೈ

Update: 2018-07-24 10:46 GMT

ಬೆಂಗಳೂರು, ಜು.24: ಮುಂಬರುವ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಿರಿಯ ನಟ ಮೋಹನ್ ಲಾಲ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವುದರ ವಿರುದ್ಧ ಮಾಡಲಾಗಿರುವ ಯಾವುದೇ ಮನವಿಗೆ ತಾನು ಸಹಿ ಹಾಕಿಲ್ಲ ಎಂದು ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರೈ ಹೇಳಿದ್ದಾರೆ.

"ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮೋಹನ್‍ ಲಾಲ್ ಜಿ ಅವರನ್ನು ಆಹ್ವಾನಿಸಿರುವುದರ ವಿರುದ್ಧದ ಮನವಿಗೆ ನಾನು ಸಹಿ ಹಾಕಿದ್ದೇನೆಂಬ ಸುದ್ದಿ ಹರಿದಾಡುತ್ತಿದೆ. ನಾನು ಯಾವುದೇ ಮನವಿಗೆ ಸಹಿ ಹಾಕಿಲ್ಲ ಹಾಗೂ ಇಂತಹ ಯಾವುದೇ ಮನವಿಯ ಬಗ್ಗೆ ನನಗೆ ತಿಳಿದಿಲ್ಲ,'' ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಕೇರಳ ಚಲನಚಿತ್ರ ಪ್ರಶಸ್ತಿಗೆ ಮೋಹನ್‍ ಲಾಲ್ ಕೂಡ ಸ್ಪರ್ಧೆಯಲ್ಲಿರುವುದರಿಂದ ಅವರನ್ನು ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಸಲ್ಲಿಸಿರುವ ಅಪೀಲಿಗೆ ಸಹಿ ಹಾಕಿದವರಲ್ಲಿ ಪ್ರಕಾಶ್ ರೈ ಕೂಡ ಒಬ್ಬರೆಂದು ಹೇಳಲಾಗಿತ್ತು.

ಈ ನಿಟ್ಟಿನಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ತಯಾರಕ ಡಾ. ಬಿಜು ತಮ್ಮ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿದ ನಂತರ ಈ  ವಿವಾದ ಹುಟ್ಟಿಕೊಂಡಿತ್ತು. ನೂರಕ್ಕೂ ಹೆಚ್ಚು  ಸದಸ್ಯರು ಈ ಮನವಿಗೆ ಸಹಿ ಹಾಕಿದ್ದಾರೆಂದೂ ಅವರು ಹೇಳಿಕೊಂಡಿದ್ದರು. ಮೋಹನ್ ಲಾಲ್ ಅವರನ್ನು ಮುಖ್ಯ ಅತಿಥಿಯನ್ನಾಗಿಸಿದರೆ ತಾವು  ಸಮಾರಂಭವನ್ನು ಬಹಿಷ್ಕರಿಸುವುದಾಗಿ ಬಿಜು ಹೇಳಿದ ನಂತರ ಅವರ ಈ ಮನವಿಯ ವಿಚಾರ ಸುದ್ದಿಯಾಗಿತ್ತು.

ಪ್ರಕಾಶ್  ರೈ ಹೊರತಾಗಿ ಛಾಯಾಗ್ರಾಹಕ ಸಂತೋಷ್ ತುಂಡಿಯಿಲ್ ಕೂಡ ತಾವು ಮೋಹನ್‍ಲಾಲ್ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿರುವುದರ ವಿರುದ್ಧವಾಗಿದ್ದೇನೆಂಬುದನ್ನು ನಿರಾಕರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News