ಮರಾಠಾ ಮೀಸಲಾತಿ ಚಳವಳಿ ನವಿ ಮುಂಬೈಯಲ್ಲಿ ಇಂಟರ್‌ನೆಟ್ ಸೇವೆ ರದ್ದು
ಮುಂಬೈ, ಜು. 26: ಮರಾಠಾ ಮೀಸಲಾತಿಗೆ ಆಗ್ರಹಿಸಿ ಬುಧವಾರ ನಡೆದ ಚಳವಳಿ ಸಂದರ್ಭ ಕೋಪರ್, ಖೈರ್ನೆಯಂತಹ ಪ್ರದೇಶಗಳಲ್ಲಿ ಹಿಂಸಾಚಾರಗಳು ಸಂಭವಿಸಿದ ಹಿನ್ನೆಲೆಯಲ್ಲಿ ನವಿ ಮುಂಬೈ ಟೌನ್‌ಶಿಪ್‌ನಲ್ಲಿ ಗುರುವಾರ ಬೆಳಗ್ಗಿನಿಂದ ಇಂಟರ್‌ನೆಟ್ ಸೇವೆ ರದ್ದುಗೊಳಿಸಲಾಗಿದೆ.
ಕೋಪರ್, ಖೈರ್ನೆಯಂತಹ ಪ್ರದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪ್ರತಿಭಟನಕಾರರ ಗುಂಪೊಂದು ಬುಧವಾರ ವಾಹನಗಳಿಗೆ ಕಲ್ಲೆಸೆದು, ಸ್ಥಳೀಯ ಜನರೊಂದಿಗೆ ಸಂಘರ್ಷಕ್ಕೆ ಇಳಿದು, ವಾಹನಗಳಿಗೆ ಬೆಂಕಿ ಹಚ್ಚಿದ ಬಳಿಕ ಕೋಪರ್, ಖೈರ್ನೆ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರು ಪ್ರತಿಭಟನಕಾರರ ಮೇಲೆ ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದ್ದರು ಹಾಗೂ ಲಾಠಿ ಚಾರ್ಜ್ ನಡೆಸಿದ್ದರು. ದುಷ್ಕರ್ಮಿಗಳು ಪೊಲೀಸ್ ಹೊರ ಠಾಣೆಗೆ ಬೆಂಕಿ ಹಚ್ಚಿದ್ದರು. ಸರಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ ಮರಾಠ ಸಂಘಟನೆಗಳು ನಡೆಸಿದ ಬಂದ್ ಸಂದರ್ಭ ಈ ಘಟನೆಗಳು ನಡೆದಿವೆ.