ಗೋಮಾಂಸ ತಿನ್ನುವ ದೇಶಗಳಲ್ಲಿ ಹಸುಗಳನ್ನು ಭಾರತಕ್ಕಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ: ಪ್ರತಾಪ್‌ಸಿಂಗ್ ರಾಣೆ

Update: 2018-07-26 16:16 GMT

ಪಣಜಿ, ಜು.26: ಗೋಮಾಂಸ ತಿನ್ನುವ ರಾಷ್ಟ್ರಗಳಲ್ಲಿ ದನಗಳನ್ನು ಭಾರತಕ್ಕಿಂತ ಉತ್ತಮವಾಗಿ ನೋಡಿಕೊಳ್ಳುತ್ತಾರೆ ಎಂದು ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪ್‌ಸಿಂಗ್ ರಾಣೆ ತಿಳಿಸಿದ್ದಾರೆ. ನಾವು ಹಸುಗಳನ್ನು ಪ್ರೀತಿಸಬಹುದು, ಆದರೂ ಭಾರತವು ಇಂದಿಗೂ ಹಸುಗಳನ್ನು ಅತ್ಯಂತ ಕೆಟ್ಟದಾಗಿ ನೋಡಿಕೊಳ್ಳುವ ರಾಷ್ಟ್ರವಾಗಿಯೇ ಪರಿಗಣಿಸಲ್ಪಟ್ಟಿದೆ. ಗೋಮಾಂಸ ತಿನ್ನುವ ರಾಷ್ಟ್ರಗಳಲ್ಲಿ ಹಸುಗಳನ್ನು ಉತ್ತಮವಾಗಿ ಸಾಕಲಾಗುತ್ತಿದೆ. ಆದರೆ ನಮ್ಮಲ್ಲಿ ದನಗಳನ್ನು ಬೀದಿ ಬೀದಿ ಅಲೆಯಲು ಬಿಡಲಾಗುತ್ತದೆ. ಹಸುಗಳು ಕಸ ಕಡ್ಡಿಗಳನ್ನು, ಪ್ಲಾಸ್ಟಿಕ್ ವಸ್ತುಗಳನ್ನು ತಿನ್ನುತ್ತಾ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ ಎಂದು ರಾಜ್ಯ ವಿಧಾನಸಭೆಯಲ್ಲಿ ಬುಧವಾರ ಮಾತನಾಡುತ್ತಿದ್ದ ಕಾಂಗ್ರೆಸ್ ಶಾಸಕ ರಾಣೆ ಹೇಳಿದರು. ಅಲ್ಲದೆ ಉಪಯೋಗವಿಲ್ಲದ ಹಸುಗಳಿಂದ ಲಾಭ ಪಡೆಯುವ ಆಯ್ಕೆಯನ್ನು ರೈತರಿಗೆ ನೀಡಬೇಕು ಎಂದವರು ತಿಳಿಸಿದರು. ಹಾಲು ಕರೆಯದ ಹಸುಗಳನ್ನು ಏನು ಮಾಡುವುದು ಎಂಬುದೇ ಹೈನುಗಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಅವುಗಳನ್ನು ಮಾರುವಂತಿಲ್ಲ ಎಂದಾದರೆ ಬೀದಿಯಲ್ಲಿ ಬಿಡಬೇಕಾಗುತ್ತದೆ. ಹೆಚ್ಚಿನ ರೈತರು ಮಾಡುತ್ತಿರುವುದೂ ಇದನ್ನೇ.ಹೀಗೆ ಬೀದಿಯಲ್ಲಿ ತಿರುಗುವ ದನಗಳು ಅಪಘಾತಕ್ಕೆ ಬಲಿಯಾಗುತ್ತಿವೆ ಎಂದು ರಾಣೆ ಹೇಳಿದರು.

   ರಾಣೆ ಹೇಳಿಕೆಗೆ ಬಿಜೆಪಿ ಶಾಸಕ ಮೈಕೆಲ್ ಲೋಬೊರವರ ಅಚ್ಚರಿಯ ಬೆಂಬಲ ದೊರಕಿತು. ಕಾನೂನುಬ್ಧವಾಗಿ ನಡೆಯುವ ಗೋಮಾಂಸದ ವ್ಯವಹಾರಕ್ಕೆ ರಕ್ಷಣೆ ಒದಗಿಸಲು ವಿಫಲವಾದ ತಮ್ಮದೇ ಸರಕಾರವನ್ನು ಲೋಬೋ ಪ್ರಶ್ನಿಸಿದರು. ಕರ್ನಾಟಕದ ಗಡಿಭಾಗದಲ್ಲಿ ನಿಂತಿರುವ ಗೋ ರಕ್ಷಕರು ನಮ್ಮ ರಾಜ್ಯಕ್ಕೆ ಗೋಮಾಂಸ ತರುವುದಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇವರಲ್ಲಿ ಕೆಲವರು ಗೋಮಾಂಸಕ್ಕೆ ಫಿನಾಯಿಲ್ ಕೂಡಾ ಬೆರೆಸುತ್ತಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು. ಸರಕಾರದ ಅಧಿಕೃತ ಕಸಾಯಿಖಾನೆ ಗೋವಾ ಮಾಂಸ ಸಂಕೀರ್ಣ ಬಾಗಿಲು ಮುಚ್ಚಿದೆ. ಗೋವಾದಲ್ಲಿ ಮಾಂಸ ತಿನ್ನುವವರು ಹಲವರಿದ್ದಾರೆ. ನಮ್ಮ ಹಬ್ಬದ ಸಂದರ್ಭದಲ್ಲಿ ಇಲ್ಲಿ ಮಾಂಸದ ಕೊರತೆಯಿರುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಗೋಮಾಂಸ ತರುವುದು ನಮಗೆ ಬೇಡವಾದರೆ ನಮ್ಮಲ್ಲಿರುವ ಅಧಿಕೃತ ಕಸಾಯಿಖಾನೆ ಕಾರ್ಯಾರಂಭ ಮಾಡಲು ಕ್ರಮ ತೆಗೆದುಕೊಳ್ಳಬೇಕು. ಗೋವಾದಲ್ಲಿ ಗೋಮಾಂಸ ತಿನ್ನುವವರು ಹಲವರಿದ್ದಾರೆ. ಅವರನ್ನು ನೀವು ತಡೆಯಲಾಗದು ಎಂದು ಲೋಬೋ ಹೇಳಿದರು.

 ಗೋವಾದಲ್ಲಿ ಪ್ರತೀ ದಿನ ಸುಮಾರು 20 ಟನ್‌ಗಳಷ್ಟು ಗೋಮಾಂಸವನ್ನು ಸೇವಿಸಲಾಗುತ್ತಿದೆ. ಗೋಮಾಂಸ ತಿನ್ನುವವರಲ್ಲಿ ಶೇ.26ರಷ್ಟು ಕ್ಯಾಥೊಲಿಕ್, ಶೇ.11ರಷ್ಟು ಮುಸ್ಲಿಮರು ಹಾಗೂ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News