ಹಿಂಸಾಚಾರದ ‘ಶ್ರೇಯ’ ಬಿಜೆಪಿ ಪಡೆಯಬೇಕು: ಶಿವಸೇನೆ

Update: 2018-07-26 16:23 GMT

ಮುಂಬೈ, ಜು.26: ತನ್ನ ವಿವಿಧ ಯೋಜನೆಗಳ ಶ್ರೇಯ(ಗೌರವ)ವನ್ನು ಪಡೆಯಲು ಯಾವಾಗಲೂ ತುದಿಗಾಲಲ್ಲಿ ನಿಲ್ಲುವ ಬಿಜೆಪಿ, ಮರಾಠರ ಪ್ರತಿಭಟನೆ ಸಂದರ್ಭ ನಡೆದ ಹಿಂಸಾಚಾರದ ಗೌರವವನ್ನೂ ಪಡೆಯಬೇಕು ಎಂದು ಶಿವಸೇನೆ ಹೇಳಿದೆ.

ಸಮಸ್ಯೆ ಎದುರಾದಾಗ ಅದನ್ನು ಮರೆಮಾಚಿಸಲು ಮುಂದಾಗುವ ರಾಜ್ಯ ಸರಕಾರದ ನೀತಿಯಿಂದಾಗಿ ಹಿಂಸಾಚಾರ ಭುಗಿಲೆದ್ದಿದೆ ಎಂದಿರುವ ಶಿವಸೇನೆ, ಗಲಭೆ ಸ್ಪೋಟಿಸಿದಾಗ ಮುಖ್ಯಮಂತ್ರಿ ಸ್ಥಳದಿಂದ ನಾಪತ್ತೆಯಾದರು ಎಂದು ಟೀಕಿಸಿದೆ.

ಬೀಡ್ ಜಿಲ್ಲೆಯ ಪಾರ್ಲಿ ಎಂಬಲ್ಲಿ ಕೆಲವು ಮಂದಿ ಪ್ರತಿಭಟನೆ ಆರಂಭಿಸಿದಾಗಲೇ ಮುಖ್ಯಮಂತ್ರಿ ಅವರೊಂದಿಗೆ ಮಾತುಕತೆಗೆ ಮುಂದಾಗಿದ್ದರೆ ಬಳಿಕದ ಘಟನೆಗಳು ನಡೆಯುತ್ತಿರಲಿಲ್ಲ. ಆದರೆ ಸರಕಾರದ ನಿಲುವಿಗೆ ರಾಜ್ಯದ ಜನತೆ ಬೆಲೆ ತೆತ್ತಿದ್ದಾರೆ ಎಂದು ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕೀಯ ಬರಹದಲ್ಲಿ ತಿಳಿಸಲಾಗಿದೆ.

 ಮರಾಠ ಪ್ರತಿಭಟನೆ ಹಿಂಸೆಯ ರೂಪಕ್ಕೆ ತಿರುಗುತ್ತಿದ್ದಂತೆ ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿ ನೆಲೆಸಿತ್ತು. ಇದೇ ವೇಳೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಎಲ್ಲಿದ್ದಾರೆ ಎಂಬುದೇ ಪತ್ತೆಯಾಗಿರಲಿಲ್ಲ. ಮರಾಠರ ಬೇಡಿಕೆ ಭಾವನಾತ್ಮಕವಾಗಿದ್ದ ಹಾಗೂ ಇದೊಂದು ಪ್ರತಿಷ್ಠೆಯ ವಿಷಯವಾಗಿದ್ದರಿಂದ, ಅಂತಿಮ 24 ಗಂಟೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚುತ್ತಿದ್ದಾಗ ಸರಕಾರ ಓಡಿ ಹೋಗಿದ್ದೇಕೆ ಎಂಬುದನ್ನು ಮಹಾರಾಷ್ಟ್ರ ತಿಳಿದುಕೊಳ್ಳಬೇಕಿದೆ ಎಂದು ‘ಸಾಮ್ನ’ದ ಲೇಖನದಲ್ಲಿ ತಿಳಿಸಲಾಗಿದೆ.

 70,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸರಕಾರದ ನಿರ್ಧಾರವೂ ಹಿಂಸಾಚಾರಕ್ಕೆ ಕಾರಣವಾಗಿದೆ. ಮೀಸಲಾತಿ ಇಲ್ಲದ ಕಾರಣ ತಮಗೆ ಉದ್ಯೋಗ ನಷ್ಟವಾಗುತ್ತದೆ ಎಂಬ ಭೀತಿಯಿಂದ ಸಹಜವಾಗಿಯೇ ಪ್ರತಿಭಟನೆ, ಹಿಂಸಾಚಾರ ನಡೆಯುತ್ತದೆ. ಮರಾಠ ಸಮುದಾಯದವರಿಗಾಗಿ ಫಡ್ನವೀಸ್ ಮತ್ತವರ ಸಹೋದ್ಯೋಗಿಗಳು ರೂಪಿಸಿರುವ ಕಾರ್ಯನೀತಿಗಳನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ಶಿವಸೇನೆ ತಿಳಿಸಿದೆ. ಕಳೆದ ವಾರ ರಾಜ್ಯದ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದ ಫಡ್ನವೀಸ್, ಬಾಂಬೆ ಹೈಕೋರ್ಟ್ ಮರಾಠ ಸಮುದಾಯದವರಿಗೆ ಮೀಸಲಾತಿಗೆ ಅವಕಾಶ ನೀಡಿದರೆ, 72,000 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಂದರ್ಭ ಶೇ.16ರಷ್ಟು ಮೀಸಲಾತಿಯಡಿ ಮರಾಠಿ ಅಭ್ಯರ್ಥಿಗಳನ್ನು ಸರಕಾರ ನೇಮಕ ಮಾಡಿಕೊಳ್ಳಲಿದೆ ಎಂದು ತಿಳಿಸಿದ್ದರು.

ಒಂದು ವೇಳೆ ಮೀಸಲಾತಿಯ ಕುರಿತು ಹೈಕೋರ್ಟ್‌ನ ತೀರ್ಪಿನ ಮೊದಲೇ 72,000 ಹುದ್ದೆಗಳನ್ನು ಭರ್ತಿ ಮಾಡಿಕೊಂಡರೂ, ಮರಾಠಿ ಅಭ್ಯರ್ಥಿಗಳನ್ನು ಹಿಂಬಾಕಿ(ಬ್ಯಾಕ್‌ಲಾಗ್) ಕೋಟಾದಡಿ ನೇಮಕಾತಿ ಮಾಡಿಕೊಳ್ಳಲಾಗುವುದು. ಆದ್ದರಿಂದ ಸಮುದಾಯಕ್ಕೆ ಖಂಡಿತಾ ಅನ್ಯಾಯವಾಗದು. ಆದರೆ ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಫಡ್ನವೀಸ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ, ಮರಾಠರಿಗೆ ಮೀಸಲಾತಿ ನೀಡುವ ಘೋಷಣೆಯ ಎಲ್ಲಾ ಶ್ರೇಯವನ್ನು ಬಿಜೆಪಿ ಪಡೆಯಲಿ. ಆದರೆ ಇದರ ಜೊತೆಗೆ, ಹಿಂಸಾಚಾರದ ಶ್ರೇಯವನ್ನೂ ಅವರು ಪಡೆಯಲು ಸಿದ್ಧರಾಗಬೇಕು ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News