ಸಿರಿಯಾದಲ್ಲಿ ಉಗ್ರರ ದಾಳಿಗೆ 200ಕ್ಕೂ ಅಧಿಕ ಮಂದಿ ಬಲಿ

Update: 2018-07-26 17:26 GMT

ಬೈರೂತ್, ಜು.26: ಆಗ್ನೇಯ ಸಿರಿಯಾದ ಸ್ವೀಡ ಪ್ರಾಂತ್ಯದಲ್ಲಿ ಉಗ್ರರು ಬುಧವಾರ ನಡೆಸಿದ ಸರಣಿ ಸ್ಫೋಟಗಳಲ್ಲಿ ಇನ್ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ದು ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಸ್ಥಳೀಯಾಡಳಿತ ತಿಳಿಸಿದೆ. ಹಲವು ವರ್ಷಗಳಲ್ಲೇ ಉಗ್ರರು ನಡೆಸಿದ ಅತ್ಯಂತ ಭೀಕರ ಸ್ಫೋಟ ಎಂದು ಹೇಳಲಾಗುತ್ತಿರುವ ಘಟನೆಯಲ್ಲಿ ಉಗ್ರರು ಪ್ರಾಂತೀಯ ರಾಜಧಾನಿಯ ಹಲವು ಗ್ರಾಮಗಳಿಗೆ ಮುತ್ತಿಗೆ ಹಾಕಿ ಅಲ್ಲಿ ಸರಣಿ ಸ್ಫೋಟಗಳನ್ನು ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸ್ವೀಡ ಪ್ರಾಂತ್ಯವು ಸಿರಿಯದಲ್ಲಿ ಸರಕಾರ ಸ್ವಾಮ್ಯತೆ ಹೊಂದಿರುವ ಪ್ರದೇಶವಾಗಿದೆ. ಆದರೆ ಇಲ್ಲಿಗೆ ಸಮೀಪವಿರುವ ಮರುಭೂಮಿಯಲ್ಲಿ ಇನ್ನೂ ಉಗ್ರರು ತಮ್ಮ ಹಿಡಿತವನ್ನು ಮುಂದುವರಿಸಿದ್ದಾರೆ. ಬುಧವಾರ ನಡೆದ ಸ್ಫೋಟಗಳು ಹಾಗೂ ಸೇನೆಯ ಜೊತೆಗಿನ ಹೋರಾಟದಲ್ಲಿ ಮೂವತ್ತೆಂಟು ಉಗ್ರರೂ ಸಾವನ್ನಪ್ಪಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಸ್ವೀಡ ನಗರದ ಈಶಾನ್ಯಕ್ಕಿರುವ ಹಲವು ಗ್ರಾಮಗಳ ಮೇಲೆ ಉಗ್ರರು ಏಕಕಾಲದಲ್ಲಿ ದಾಳಿ ನಡೆಸಿ ಅಲ್ಲಿ ನಿಯೋಜಿಸಲಾಗಿದ್ದ ಸರಕಾರಿ ಪಡೆಗಳ ಜೊತೆ ಹೋರಾಡಿದ್ದಾರೆ ಎಂದು ಮಾಧ್ಯಮಗಳು ಹಾಗೂ ಮಾನವಹಕ್ಕುಗಳ ಯುದ್ಧನಿಗಾ ವೀಕ್ಷಕರು ತಿಳಿಸಿದ್ದಾರೆ. ಸ್ವೀಡ ನಗರದಲ್ಲೇ ಇಬ್ಬರು ಆತ್ಮಾಹುತಿ ದಾಳಿಕೋರರನ್ನು ತಮ್ಮನ್ನು ತಾವು ಸ್ಫೋಟಿಸಿಕೊಂಡಿದ್ದಾರೆ. ಇನ್ನಿಬ್ಬರು ಉಗ್ರರು ತಮ್ಮಲ್ಲಿದ್ದ ಸ್ಫೋಟಕವನ್ನು ಸ್ಫೋಟಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಸ್ಥಳಿಯ ಸುದ್ದಿ ಸಂಸ್ಥೆ ಸನ ವರದಿ ಮಾಡಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯರು ತಮ್ಮ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸ್ಥಳೀಯಾಸ್ಪತ್ರೆಗಳು ಸ್ಫೋಟದ ಗಾಯಾಳುಗಳಿಂದ ತುಂಬಿ ಹೋಗಿವೆ ಎಂದು ವರದಿಗಳು ತಿಳಿಸಿವೆ. ಉದ್ರಿಕ್ತ ಗ್ರಾಮಸ್ಥರು ಹತ್ಯೆಗೀಡಾದ ಉಗ್ರರ ದೇಹಗಳನ್ನು ನೇತು ಹಾಕುವ ಮೂಲಕ ಆಕ್ರೊಶ ವ್ಯಕ್ತಪಡಿಸಿದ್ದಾರೆ. ರಶ್ಯಾ ಮತ್ತು ಅಮೆರಿಕದ ಸಹಯೋಗದಿಂದ ಸಿರಿಯ ಸರಕಾರ ಉಗ್ರರ ವಿರುದ್ಧ ಸಮರ ಸಾರಿದ್ದು ಇದರಿಂದ ಸಿರಿಯದ ಬಹುತೇಕ ಭಾಗಗಳು ಉಗ್ರರ ಕೈತಪ್ಪಿವೆ. ಈ ಹಿನ್ನೆಲೆಯಲ್ಲಿ ತಮ್ಮ ವಶದಲ್ಲಿರುವ ನೆಲೆಗಳ ಮೂಲಕ ಸಮೀಪದ ಗ್ರಾಮಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಮರುವಶಪಡಿಸಿಕೊಳ್ಳಲು ಉಗ್ರರು ಹವಣಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News