ಪಾಕ್ ಸಾರ್ವತ್ರಿಕ ಚುನಾವಣೆ: ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಅತಿ ದೊಡ್ಡ ಪಕ್ಷ

Update: 2018-07-27 06:24 GMT

ಇಸ್ಲಾಮಾಬಾದ್, ಜು.27: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್-ಎ-ಇನ್ಸಾಫ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಬಹುಮತ ಕೊರತೆ ಎದುರಿಸುತ್ತಿರುವ ಪಿಟಿಐ ಪಕ್ಷ ಸರಕಾರ ರಚನೆಗೆ ಇತರ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

 ಸಂಸತ್ ಹಾಗೂ ನಾಲ್ಕು ಪ್ರಾಂತೀಯ ವಿಧಾನಸಭೆಗಳ ಚುನಾವಣೆಯ ಮತ ಎಣಿಕೆಯು ಶೇ.95ರಷ್ಟು ಪೂರ್ಣಗೊಂಡಿದೆ ಎಂದು ಪಾಕ್ ಚುನಾವಣಾ ಆಯೋಗ(ಇಸಿಬಿ)ಶುಕ್ರವಾರ ಬೆಳಗ್ಗೆ ತಿಳಿಸಿದೆ.

ಪಾಕಿಸ್ತಾನದ ಸಂಸತ್‌ನ 19 ಸೀಟುಗಳು, ನಾಲ್ಕು ಪ್ರಾಂತೀಯ ವಿಧಾನಸಭೆಗಳಾದ ಪಂಜಾಬ್‌ನ 6, ಸಿಂಧ್‌ನ 11, ಖೈಬರ್-ಪಖ್ತುಂಖ್ವಾ(ಕೆಪಿ)ಯ 2 ಹಾಗೂ ಬಲೂಚಿಸ್ತಾನದ 5 ಸೀಟುಗಳ ಅಧಿಕೃತ ಫಲಿತಾಂಶ ಇನ್ನಷ್ಟೇ ಹೊರಬರಬೇಕಾಗಿದೆ ಎಂದು ಇಸಿಪಿ ತಿಳಿಸಿದೆ.

ಒಟ್ಟು 272 ಸದಸ್ಯರನ್ನು ಒಳಗೊಂಡಿರುವ ಪಾಕಿಸ್ತಾನದ ಸಂಸತ್‌ನಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ 110 ಕ್ಷೇತ್ರಗಳಲ್ಲಿ ಗೆದ್ದುಕೊಂಡಿದೆ. ಸರಳ ಬಹುಮತಕ್ಕೆ 137 ಸ್ಥಾನಗಳ ಅಗತ್ಯವಿದೆ.

 ಪಿಟಿಐ ಪಕ್ಷ ಪಂಜಾಬ್‌ನಲ್ಲಿ 118, ಸಿಂಧ್‌ನಲ್ಲಿ 20, ಕೆಪಿಯಲ್ಲಿ 66 ಹಾಗೂ ಬಲೂಚಿಸ್ತಾನದಲ್ಲಿ 4 ಸ್ಥಾನಗಳಲ್ಲಿ ಜಯ ಗಳಿಸಿದೆ.

ಪಿಟಿಐ ಪ್ರತಿಸ್ಪರ್ಧಿ, ಆಡಳಿತಾರೂಢ ನವಾಝ್ ಶರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಝ್(ಪಿಎಂಎಲ್-ಎನ್)ಪಕ್ಷ ನ್ಯಾಶನಲ್ ಅಸೆಂಬ್ಲಿಯಲ್ಲಿ 63 ಸೀಟುಗಳನ್ನು ಬಾಚಿಕೊಂಡಿದೆ. ಪಂಜಾಬ್‌ನಲ್ಲಿ 127, ಕೆಪಿಯಲ್ಲಿ 5 ಹಾಗೂ ಬಲೂಚಿಸ್ತಾನದಲ್ಲಿ ಕೇವಲ ಒಂದು ಸೀಟು ಗೆದ್ದುಕೊಂಡಿದೆ. ಸಿಂಧ್ ಪ್ರಾಂತ್ಯದಲ್ಲಿ ಶೂನ್ಯ ಸಾಧನೆ ಮಾಡಿದೆ.

ಪಾಕ್‌ನ ಮಾಜಿ ಪ್ರಭಾವಿ ನಾಯಕಿ ಬೆನಝಿರ್ ಬುಟ್ಟೊ ಪುತ್ರ ಬಿಲಾವಲ್ ಬುಟ್ಟೊ ನೇತೃತ್ವದ ಪಾಕಿಸ್ತಾನದ ಪೀಪಲ್ಸ್ ಪಾರ್ಟಿ(ಪಿಪಿಪಿ)ಸಂಸತ್‌ನ 42 ಸ್ಥಾನಗಳನ್ನು ಗೆದ್ದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News