×
Ad

ಉತ್ತರಪ್ರದೇಶ: ಭಾರೀ ಮಳೆ 27 ಸಾವು

Update: 2018-07-27 21:34 IST

ಲಕ್ನೋ, ಜು. 27: ಉತ್ತರಪ್ರದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆ ಸುರಿದಿದ್ದು, ಮಳೆ ಸಂಬಂಧಿ ದುರ್ಘಟನೆಗಳಿಂದ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಕಡಿಮೆ ತೀವ್ರತೆಯಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ ಭಾರೀ ಮಳೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮನೆಗಳು, ಗೋಡೆಗಳು ಕುಸಿದಿವೆ. ರಸ್ತೆಗಳು ಜಲಾವೃತವಾಗಿವೆ. ಇದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಜೆ.ಪಿ. ಗುಪ್ತಾ ಹೇಳಿದ್ದಾರೆ. ಹಲವು ರೈಲುಗಳು ತಡವಾಗಿ ಸಂಚರಿಸಿದವು. ಪ್ರತಿಕೂಲ ಹವಾಮಾನದ ಕಾರಣದಿಂದ ವಿಮಾನ ಸಂಚಾರಕ್ಕೆ ಅಡ್ಡಿ ಉಂಟಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ರೈಲು ಹಳಿ ಜಲಾವೃತವಾದ ಹಿನ್ನೆಲೆಯಲ್ಲಿ ಭೋಪಾಲ್ ಶತಾಬ್ದಿ, ತಾಜ್ ಎಕ್ಸ್‌ಪ್ರೆಸ್, ಗಟಿಮನ್ ಎಕ್ಸ್‌ಪ್ರೆಸ್, ಲಕ್ನೋ ಮೈಲ್, ಸ್ವರ್ಣ ಶತಾಬ್ದಿ ರೈಲುಗಳು ನಿಗದಿತ ಸಮಯಕ್ಕಿಂತ ತಡವಾಗಿ ಸಂಚರಿಸಿದವು. ರನ್‌ವೇ ಜಲಾವೃತವಾದ ಕಾರಣ ಆಗ್ರ-ಜೈಪುರ ವಿಮಾನ ಹಾರಾಟವನ್ನು ಗುರುವಾರ ರದ್ದುಗೊಳಿಸಲಾಯಿತು. ಆಗ್ರಾದ ಉರ್ಖಾರ ರಸ್ತೆಯಲ್ಲಿರುವ ಮೀರಾ ವಿಹಾರ ಕಾಲನಿಯಲ್ಲಿ ನೆರೆ ನೀರು ತುಂಬಿಕೊಂಡಿದ್ದು, ಸುಮಾರು 500ಕ್ಕೂ ಅಧಿಕ ಜನರು ಸಿಲುಕಿಕೊಂಡಿದ್ದರು. ಅವರನ್ನು ಅನಂತರ ದೋಣಿ ಬಳಸಿ ರಕ್ಷಿಸಲಾಯಿತು. ದಿಲ್ಲಿಯಲ್ಲಿ ಭಾರೀ ಮಳೆ ಹೊಸದಿಲ್ಲಿ: ದಿಲ್ಲಿಯಲ್ಲಿ ಶುಕ್ರವಾರ ಭಾರೀ ಮಳೆ ಸುರಿದಿದೆ. ನಗರದ ವಿವಿಧ ಭಾಗಗಳಲ್ಲಿ ಮಳೆ ಸುರಿದ ಪರಿಣಾಮ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಗಾಝಿಯಾಬಾದ್‌ನಲ್ಲಿ ಶಾಲೆಗಳಿಗೆ ರಜೆ ಘೋಷಿಸುವಂತೆ ಜಿಲ್ಲಾ ದಂಡಾಧಿಕಾರಿ ಆದೇಶಿಸಿದ್ದಾರೆ. ದಿಲ್ಲಿ ಹಾಗೂ ನೋಯ್ಡಾದಲ್ಲಿ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News