ಅತ್ಯಾಚಾರಗೈದರು, ಉಪವಾಸ ಕೆಡವಿ ಸಿಗರೇಟಿನಿಂದ ಸುಟ್ಟರು....
ಪಾಟ್ನಾ,ಜು.28: ಕಳೆದ ವರ್ಷ ಮೇಲ್ವಿಚಾರಕ ಮತ್ತು ಅತಿಥಿಗಳು 29 ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ ಬಿಹಾರದ ಮುಝಫ್ಫರಪುರ ಆಶ್ರಮದಿಂದ ಚಿತ್ರಹಿಂಸೆ ಮತ್ತು ಶೋಷಣೆಯ ಭಯಾನಕ ವಿವರಗಳು ಹೊರಬೀಳುತ್ತಿವೆ.
ಮುಝಫ್ಫರಪುರದ ಅಲ್ಪಾವಧಿ ವಸತಿ ಆಶ್ರಮದಿಂದ ರಕ್ಷಿಸಿ ಮೋಕಾಮಾದ ನಝರೆತ್ ಅಕಾಡಮಿಯಲ್ಲಿ ಇರಿಸಲಾಗಿರುವ ಈ ನತದೃಷ್ಟ ಬಾಲಕಿಯರನ್ನು ಭೇಟಿಯಾದ ಬಿಹಾರ ರಾಜ್ಯ ಮಹಿಳಾ ಆಯೋಗದ ಸದಸ್ಯೆಯರು,ಅವರನ್ನು ಯಾಮಾರಿಸಲಾಗಿತ್ತು ಮತ್ತು ಮೌನವಾಗಿರಲು ಹಾಗೂ ಲೈಂಗಿಕ ಶೋಷಣೆಗೆ ಅವಕಾಶ ನೀಡುವಂತಾಗಲು ಮಾದಕ ದ್ರವ್ಯಗಳನ್ನು ನೀಡಲಾಗಿತ್ತು ಎಂದು ತಿಳಿಸಿದರು. ಬಾಲಕಿಯರು ಪ್ರತಿಭಟಿಸಿದರೆ ಅವರಿಗೆ ಅನ್ನಾಹಾರ ನೀಡದೆ ಉಪವಾಸ ಕೆಡವಲಾಗುತ್ತಿತ್ತು ಮತ್ತು ಬೂಟುಗಳಿಂದ ಥಳಿಸಲಾಗುತ್ತಿತ್ತು ಎಂದರು.
ತಮ್ಮ ಮೇಲಿನ ದೌರ್ಜನ್ಯಗಳ ಬಗ್ಗೆ ದೂರಿಕೊಂಡು ಪ್ರತಿಭಟಿಸಿದವರನ್ನು ವಿವಸ್ತ್ರಗೊಳಿಸಿ ಥಳಿಸಲಾಗುತ್ತಿತ್ತು ಮತ್ತು ಉರಿಯುತ್ತಿರುವ ಸಿಗರೇಟ್‌ಗಳಿಂದ ಸುಡಲಾಗುತ್ತಿತ್ತು. ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದ ಓರ್ವ ಬಾಲಕಿಯನ್ನು ಥಳಿಸಿ ಕೊಲ್ಲಲಾಗಿತ್ತು ಮತ್ತು ಶವವನ್ನು ರಿಕ್ಷಾವೊಂದರಲ್ಲಿ ಸಾಗಿಸಿ ಎಸೆಯಲಾಗಿತ್ತು ಎಂದು ಆಯೋಗವು ತಿಳಿಸಿದೆ.
ಒಟ್ಟು 31 ಬಾಲಕಿಯರನ್ನು ಆಶ್ರಮದಿಂದ ರಕ್ಷಿಸಿ ನಝರೆತ್ ಅಕಾಡಮಿಯಲ್ಲಿ ಆಶ್ರಯ ಕಲ್ಪಿಸಲಾಗಿದ್ದು,ಬೆಂಗಳೂರು ಮತ್ತು ದಿಲ್ಲಿಯ ಇಬ್ಬರು ತಜ್ಞರು ಕಳೆದ ಕೆಲವು ದಿನಗಳಿಂದ ಅವರಿಗೆ ಕೌನ್ಸೆಲಿಂಗ್ ನಡೆಸುತ್ತಿದ್ದಾರೆ.
ಪಾಟ್ನಾದ ಆಸ್ಪತ್ರೆಯೊಂದರಲ್ಲಿ ತಾನು ಅವರನ್ನು ಭೇಟಿಯಾದಾಗಿನ ಸ್ಥಿತಿಗೆ ಹೋಲಿಸಿದರೆ ಈಗ ಹೆಚ್ಚಿನ ಬಾಲಕಿಯರು ಚೇತರಿಸಿಕೊಂಡಿದ್ದಾರೆ. ಆದರೆ ತಾವು ಅನುಭವಿಸಿದ್ದ ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಮರೆಯಲು ಅವರಿಗೆ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಆಯೋಗದ ಅಧ್ಯಕ್ಷೆ ದಿಲಮಣಿ ಮಿಶ್ರಾ ಅವರು ತಿಳಿಸಿದರು.
ಆಶ್ರಮದಲ್ಲಿ ಓರ್ವ ಬಾಲಕಿ ಹತಾಶಗೊಂಡು ಗಾಜಿನ ತುಂಡಿನಿಂದ ಮಣಿಗಂಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಸಹವಾಸಿಗಳ ಸಮಯಪ್ರಜ್ಞ್ಞೆಯಿಂದಾಗಿ ಬದುಕುಳಿದಿದ್ದಾಳೆ. ಆಕೆಯ ಗಾಯಗಳು ಪೂರ್ಣವಾಗಿ ಮಾಗಿಲ್ಲ. ಅಕಾಡೆಮಿಯಲ್ಲಿ ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನೋರ್ವ ಬಾಲಕಿ ಪ್ರತಿಭಟನೆಯ ಸಂಕೇತವಾಗಿ ತನ್ನ ಮಣಿಗಂಟಿನ ಮೇಲೆ ತನ್ನ ಸೋದರನ ಹೆಸರನ್ನು ಕೆತ್ತಿಕೊಂಡಿದ್ದಳು ಎಂದರು.
ಈ ಎಲ್ಲ ವರ್ಷಗಳಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮತ್ತು ಜಿಲ್ಲಾ ಉಸ್ತುವಾರಿ ಸಮಿತಿಯ ಅಧಿಕಾರಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರಾದರೂ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ದ ದೂರಿಕೊಳ್ಳುವ ಧೈರ್ಯ ಈ ನತದೃಷ್ಟ ಬಾಲಕಿಯರಲ್ಲಿ ಇರಲಿಲ್ಲ. ಅವರು ಬಾಯಿ ಬಿಡದಂತೆ ಆಶ್ರಮದ ಸಿಬ್ಬಂದಿ ಜೊತೆಯಲ್ಲಿಯೇ ಇರುತ್ತಿದ್ದರು ಎಂದು ಆಯೋಗದ ಸದಸ್ಯೆ ಡಾ.ನಿಕ್ಕಿ ಹೆಂಬ್ರಾಂ ತಿಳಿಸಿದರು.
ಮುಂಬೈನ ಟಾಟಾ ಸಮಾಜ ವಿಜ್ಞಾನ ಸಂಸ್ಥೆಯು ಕಳೆದ ವರ್ಷ ಬಿಹಾರದಲ್ಲಿಯ ಆಶ್ರಯ ತಾಣಗಳ ಬಗ್ಗೆ ಸಮೀಕ್ಷೆಯೊಂದನ್ನು ನಡೆಸಿದಾಗ ಮುಝಫ್ಫರಪುರ ಆಶ್ರಮದಲ್ಲಿಯ ಕರ್ಮಕಾಂಡ ಬೆಳಕಿಗೆ ಬಂದಿತ್ತು. ಸಂಸ್ಥೆಯು ತನ್ನ ವರದಿಯನ್ನು ಈ ವರ್ಷದ ಎಪ್ರಿಲ್‌ನಲ್ಲಿ ಸಲ್ಲಿಸಿದ್ದು,ಮೇ 1ರಂದು ಸರಕಾರವು ಎಫ್‌ಐಆರ್ ದಾಖಲಿಸಿತ್ತು.